ಕುಡಿದು ವಾಹನ ಚಲಾಯಿಸಿ ಕಾರುಗಳಿಗೆ ಸರಣಿ ಅಪಘಾತ ಮಾಡಿದ ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೊ ಆಸ್ಪತ್ರೆ ಸಿಗ್ನಲ್ ಬಳಿ ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಲಾಗಿದೆ. ಈ ವೇಳೆ ಒಂದಕ್ಕೊಂದು ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಪಾರ್ಚೂನರ್ ಕಾರಿನಲ್ಲಿ ಮಯೂರ್ ಪಟೇಲ್ ಬರುತ್ತಿದ್ದರು. ತಾನೇ ಕಾರು ಚಲಾಯಿಸುತ್ತಿದ್ದರು. ವೇಗ ಮತ್ತು ಅಜಾಗರೂಕ ಚಾಲನೆಯಿಂದ ಅಪಘಾತವಾಗಿದೆ. ಈ ಘಟನೆಯಲ್ಲಿ ನಾಲ್ಕು ಕಾರುಗಳು ಜಖಂಗೊಂಡಿವೆ.

ಎರಡು ಸ್ವಿಫ್ಟ್ ಡಿಜೈರ್ ಕಾರು, ಮತ್ತೊಂದು ಸರ್ಕಾರಿ ಕಾರು ಜಖಂಗೊಂಡಿವೆ. ಡ್ರಂಕ್ & ಡ್ರೈವ್ ಮಾಡಿ ಅಪಘಾತ ಎಸಗಿದ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಹಲಸೂರು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಯೂರ್ ಪಟೇಲ್ ಕರೆತಂದು ಡ್ರಂಕ್ & ಡ್ರೈವ್ ಪರೀಕ್ಷೆ ನಡೆಸಲಾಯಿತು. ಡಿಡಿ ತಪಾಸಣೆ ವೇಳೆ ಪಾಸಿಟಿವ್ ಬಂದಿದೆ. ಜಖಂಗೊಂಡ ಕಾರು ಚಾಲಕರಿಂದ ಅಪಘಾತದ ಬಗ್ಗೆ ದೂರು ನೀಡಲಾಗಿದೆ. ಈ ಸಂಬಂಧ ನಟನ ವಿರುದ್ಧ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಾರು ಚಾಲಕ ಶ್ರೀನಿವಾಸ್ ಎಂಬವರು ಕೊಟ್ಟ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಕುಡಿದು ವಾಹನ ಚಲಾಯಿಸಿ ಅಪಘಾತ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ನಟ ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರು ಸೀಜ್ ಮಾಡಲಾಗಿದೆ.















