ಭೋಪಾಲ್ : ಜೈಲಿನಲ್ಲಿರುವ ತನ್ನ ಪ್ರಿಯಕರನ ಭೇಟಿಯಾಗಲು ಬಂದ ಯುವತಿ ರೀಲ್ಸ್ ಮಾಡಿ ಹರಿಬಿಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಜೈಲಿನ ಭದ್ರತೆ ಮತ್ತು ಮೇಲ್ವಿಚಾರಣೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಛತ್ತೀಸ್ಗಢದ ಅತ್ಯಂತ ಸುರಕ್ಷಿತ ಜೈಲು ಎಂದೇ ಹೆಸರಾಗಿದ್ದ ರಾಯ್ಪುರ ಕೇಂದ್ರ ಕಾರಾಗೃಹವು ಈಗ ಸುದ್ದಿಯಲ್ಲಿದೆ. ಹೊರಗಡೆಯಿಂದ ಯಾರು ಕೂಡ ಜೈಲಿನೊಳಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಆದರೆ, ಯುವತಿ ಜೈಲಿನ ಸಂದರ್ಶಕ ಕೋಣೆಯೊಳಗೆ ಮುಕ್ತವಾಗಿ ವೀಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾಳೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಜೈಲಿನ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ವೈರಲ್ ಆಗಿರುವ ಈ ಕ್ಲಿಪ್ನಲ್ಲಿ, ಯುವತಿ ಭಾವನಾತ್ಮಕವಾಗಿ ಕ್ಯಾಮೆರಾದ ಮುಂದೆ ಮಾತನಾಡುತ್ತಾ, ‘ಇಂದು ನನ್ನ ಲವ್ವರ್ ಹುಟ್ಟುಹಬ್ಬ. ನಾನು ಅವನನ್ನು ಭೇಟಿಯಾಗಲು ಜೈಲಿಗೆ ಬಂದಿದ್ದೇನೆ. ಅವನು ನನ್ನೊಂದಿಗೆ ಇಲ್ಲದಿರುವುದು ತುಂಬಾ ನೋವುಂಟುಮಾಡುತ್ತದೆ. ಅವನ ಹುಟ್ಟುಹಬ್ಬದಂದು ನಾನು ಅವನೊಂದಿಗೆ ಇಲ್ಲ. ಆದರೆ, ನಾನು ಅವನನ್ನು ಭೇಟಿಯಾಗಲು ಬಂದಿದ್ದೇನೆ. ಅವನ ಪ್ರತಿಕ್ರಿಯೆ ಏನೆಂದು ನೋಡೋಣ’ ಎಂದು ಹೇಳುತ್ತಿರುವುದು ಕಂಡುಬರುತ್ತದೆ.
ಸಂದರ್ಶಕ ಕೋಣೆಯೊಳಗೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ವೀಡಿಯೋ ಮಾಡಿದ್ದಾಳೆ. ನಂತರ ಅದನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗೆ ಅಪ್ಲೋಡ್ ಮಾಡಿದ್ದಾಳೆ. ವೀಡಿಯೋದಲ್ಲಿ ಕಾಣುತ್ತಿರುವ ಕೈದಿಯನ್ನು ತಾರಕೇಶ್ವರ ಎಂದು ಗುರುತಿಸಲಾಗಿದ್ದು, ಪ್ರಸ್ತುತ ರಾಯ್ಪುರ ಕೇಂದ್ರ ಕಾರಾಗೃಹದಲ್ಲಿ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ (ಎನ್ಡಿಪಿಎಸ್) ಕಾಯ್ದೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ವೈರಲ್ ವೀಡಿಯೋದ ಬಗ್ಗೆ ಜೈಲು ಅಧಿಕಾರಿಗಳು ಇಲ್ಲಿಯವರೆಗ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾವನಾತ್ಮಕ ಭೇಟಿಯಲ್ಲ, ಬದಲಾಗಿ ಜೈಲು ನಿಯಮಗಳ ಸ್ಪಷ್ಟ ಉಲ್ಲಂಘನೆಯೇ ಆಕ್ರೋಶಕ್ಕೆ ಕಾರಣವಾಗಿದೆ. ಭೇಟಿ ನೀಡುವ ಸ್ಥಳಕ್ಕೆ ಮೊಬೈಲ್ ಫೋನ್ಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೂ ಯುವತಿ ಫೋನ್ನೊಂದಿಗೆ ಜೈಲಿನೊಳಗೆ ಪ್ರವೇಶಿಸಿದ್ದಲ್ಲದೆ, ಜೈಲಿನೊಳಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಎಂಟ್ರಿಗೂ ಮೊದಲು ಜೈಲಿನ ಹೊರಗೆ ಒಂದು ವೀಡಿಯೋವನ್ನು ಚಿತ್ರೀಕರಿಸಲಾಯಿತು. ನಂತರ ಒಳಗಿನಿಂದ ದೃಶ್ಯಗಳನ್ನು ತೋರಿಸಲಾಯಿತು.















