ಮಾಸ್ಕೋ : ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಶಾಂತಿ ಮಾತುಕತೆಗೆ ಉಕ್ರೇನ್ ಅನ್ನು ರಷ್ಯಾ ಆಹ್ವಾನಿಸಿದೆ. ಯುದ್ಧದಲ್ಲಿ ಮಡಿದವರ ಮೃತದೇಹಗಳನ್ನು ಎರಡೂ ದೇಶಗಳು ವಿನಿಮಯ ಮಾಡಿಕೊಳ್ಳುತ್ತಿವೆ.
ರಷ್ಯಾ ಮತ್ತು ಉಕ್ರೇನ್ ಪರಸ್ಪರ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಲು ಒಪ್ಪಿಕೊಂಡಿವೆ ಎಂದು ವರದಿಗಳಾಗುತ್ತಿವೆ. ಆದರೆ, ಈ ಬಗ್ಗೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರ ಬೆನ್ನಲ್ಲೇ ಶಾಂತಿ ಮಾತುಕತೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಆಹ್ವಾನ ನೀಡಿದೆ.
ಕಳೆದ ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಮಾತುಕತೆಗಳು ಶಾಂತಿ ಒಪ್ಪಂದವನ್ನು ಸಾಧಿಸುವ ಪ್ರಯತ್ನಗಳಿಗೆ ಹೊಸ ವೇಗವನ್ನು ನೀಡಿವೆ. ಆದರೆ, ರಷ್ಯಾ ಮತ್ತು ಉಕ್ರೇನ್ ಮಾತುಕತೆ ನಿಲುವುಗಳ ನಡುವೆ ಭಿನ್ನಾಭಿಪ್ರಾಯ ಮುಂದುವರೆದಿವೆ.

ಅಮೆರಿಕದ ಮಧ್ಯಸ್ಥಿಕೆಯ ಮಾತುಕತೆಯ ನಂತರ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ವ್ಲಾಡಿಮಿರ್ ಪುಟಿನ್ ಸಭೆ ನಡೆಸಲು ಇಚ್ಛಿಸಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಸಂಧಾನ ನಿಯೋಗಗಳ ನಡುವೆ ಅಬುಧಾಬಿಯಲ್ಲಿ ಹೊಸ ಸುತ್ತಿನ ಮಾತುಕತೆ ಭಾನುವಾರ ನಡೆಯಲಿದೆ. ಎರಡನೇ ಮಹಾಯುದ್ಧದ ನಂತರದ ಯುರೋಪಿನ ಅತಿದೊಡ್ಡ ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಒತ್ತಾಯಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಪ್ರಕ್ರಿಯೆಯಲ್ಲಿ ಒಳ್ಳೆಯ ಬೆಳವಣಿಗೆಗಳು ನಡೆಯುತ್ತಿವೆ ಎಂದಿದ್ದಾರೆ.
ಯಾವುದೇ ಒಪ್ಪಂದದಲ್ಲಿ ಯಾರಿಗೆ ಯಾವ ಪ್ರದೇಶ ಸಿಗುತ್ತದೆ, ಯುದ್ಧಾನಂತರದ ಉಕ್ರೇನ್‌ನಲ್ಲಿ ಅಂತರರಾಷ್ಟ್ರೀಯ ಶಾಂತಿಪಾಲಕರು ಅಥವಾ ಮಾನಿಟರ್‌ಗಳ ಉಪಸ್ಥಿತಿ ಮತ್ತು ರಷ್ಯಾ ನಿಯಂತ್ರಿತ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಭವಿಷ್ಯ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿವೆ.















