ಬೀದರ್ : ಹುಮ್ನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರಿಗೆ ಗಂಭೀರ ಗಾಯಗೊಂಡ ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಮತ್ತು ಚಿಕಿತ್ಸಾ ವೆಚ್ಚ ಭರಿಸಲು ಜಿಲ್ಲಾಡಳಿತಕ್ಕೆ ಅವರು ಸೂಚಿಸಿದ್ದಾರೆ. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಫೋಟಕ ಪರೀಕ್ಷಾ ತಜ್ಞರನ್ನು ಸ್ಥಳಕ್ಕೆ ಕಳುಹಿಸಿ ಮಾದರಿ ಸಂಗ್ರಹಿಸಿ ತನಿಖೆ ಮಾಡಲು ಆದೇಶಿಸಿದ್ದಾರೆ.
ಸ್ಫೋಟಕ್ಕೆ ಕಾರಣವೇನು? ಸ್ಫೋಟಕ್ಕೆ ಬಳಕೆಯಾಗಿರುವ ವಸ್ತು ಯಾವುದು? ಆ ಸ್ಫೋಟಕ ವಸ್ತು ಅಲ್ಲಿಗೆ ಹೇಗೆ ಬಂತು? ಯಾವ ಉದ್ದೇಶಕ್ಕೆ ಅದು ಬಳಕೆಯಾಗುತ್ತಿತ್ತು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.















