ನವದೆಹಲಿ : ಪುಲ್ವಾಮಾ ದಾಳಿ ನಡೆದು 7 ವರ್ಷದ ಹಿನ್ನೆಲೆ ಘಟನೆಯಲ್ಲಿ ಮೃತಪಟ್ಟ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಹುತಾತ್ಮ ಯೋಧರನ್ನು ವೀರ ಸೇನಾನಿಗಳು ಎಂದು ಶ್ಲಾಘಿಸಿದ್ದಾರೆ.
2019ರ ಈ ದಿನ ಪುಲ್ವಾಮಾ ದಾಳಿಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿಗಳನ್ನು ಸ್ಮರಿಸುತ್ತಿದ್ದೇವೆ. ಅವರ ದೇಶಭಕ್ತಿ ಮತ್ತು ಸೇವೆ ಸದಾ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಅವರ ಧೈರ್ಯವು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ ನೀಡುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡಾ ಪುಲ್ವಾಮಾ ದಾಳಿಯ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದು, 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತರಾದ ವೀರ ಯೋಧರಿಗೆ ನನ್ನ ಹೃದಯಪೂರ್ವಕ ಗೌರವ ನಮನಗಳು.
ತಾಯಿ ಭಾರತಿಯನ್ನು ರಕ್ಷಿಸಲು ಅವರು ಮಾಡಿದ ಮಹಾನ್ ತ್ಯಾಗಕ್ಕೆ ದೇಶವೆಂದೂ ಅವರಿಗೆ ಚಿರಋಣಿಯಾಗಿರಲಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಕೂಡಾ ಪುಲ್ವಾಮಾ ದಾಳಿಯ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಫೆಬ್ರವರಿ 14, 2019ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರತೀಯ ಇತಿಹಾಸದಲ್ಲೇ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ 40 ಮಂದಿ ಸಿಆರ್ಪಿಎಫ್ ಯೋಧರು ಮೃತಪಟ್ಟಿದ್ದರು.















