ಹಾಸನ : ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ, ಯಲಿಯೂರು ಗ್ರಾಮದಿಂದ ಗುರುವಾರ ಚಿಕ್ಕಮಗಳೂರಿಗೆ ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ಪಟ್ಟಣದಲ್ಲಿ ನಡೆದಿದೆ. ಬೇಲೂರು ತಾಲೂಕಿನ, ಮತ್ತಾವರ ಗ್ರಾಮದ ಮಹಿಳೆ ಪ್ರಿಯಾಂಕ (29) ಕಾಣಿಯಾಗಿರುವ ಮಹಿಳೆ ಎಂದು ಗುರುತಿಸಲಾಗಿದೆ.
ಹಾಸನ ತಾಲೂಕಿನ, ಕಲ್ಕೆರೆ ಗ್ರಾಮದ ಬಳಿ ಮಹಿಳೆಯ ಒಳ ಉಡುಪು, ಚಪ್ಪಲಿ ಹಾಗೂ ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಕೊಲೆ ಮಾಡಿ ಸಮೀಪದಲ್ಲಿರುವ ಕೆರೆಗೆ ಶವ ಎಸೆದಿರುವ ಅನುಮಾನದ ಮೇರೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳಕ್ಕೆ ಎಸ್ಪಿ ಶುಭನಿತ್ವಾ, ಸೋಕೋ ತಂಡ, ಡಾಗ್ ಸ್ಕಾö್ಯಡ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಪ್ರಿಯಾಂಕ ಯಲಿಯೂರು ಗ್ರಾಮದ ರುದ್ರೇಶ್ ಅವರೊಂದಿಗೆ ವಿವಾಹವಾಗಿದ್ದು, ಒಬ್ಬ ಗಂಡು ಮಗನಿದ್ದಾನೆ. ಫೆಬ್ರವರಿ 12ರಂದು ಚಿಕ್ಕಮಗಳೂರಿನ ಮದುವೆ ಕಾರ್ಯಕ್ರಮಕ್ಕೆ ಪ್ರಿಯಾಂಕ ಆಗಮಿಸಿದ್ದರು. ಮದುವೆ ಮುಗಿಸಿ ತವರು ಮನೆ ಮತ್ತಾವರ ಗ್ರಾಮಕ್ಕೆ ಬಂದು, ಕೆಲ ಸಮಯ ಕಳೆದು ನಂತರ ತಾಯಿ ಜೊತೆ ಕೈಮರ ಗ್ರಾಮಕ್ಕೆ ಬಂದು ಬೇಲೂರಿಗೆ ಬಸ್ ಹತ್ತಿದ್ದಾರೆ.
ಬಳಿಕ ಬೇಲೂರಿನಲ್ಲಿ ಬಸ್ ಇಳಿದು ತನ್ನ ಚಿಕ್ಕಮ್ಮ ಸೌಮ್ಯಾ ಅವರಿಗೆ ಕರೆ ಮಾಡಿ ಪರಿಚಯಸ್ಥರು ಸಿಕ್ಕಿದ್ದಾರೆ. ಅವರ ಜೊತೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು ಪತಿ ರುದ್ರೇಶ್ಗೂ ಕರೆ ಮಾಡಿದ್ದ ಪ್ರಿಯಾಂಕ ಕುಣಿಗಲ್ಗೆ ಬಂದು ಕರೆದುಕೊಂಡು ಹೋಗಿ ಎಂದಿದ್ದರಂತೆ. ಆದಾದ ಬಳಿಕ ಸೌಮ್ಯ ರಾತ್ರಿ 8:30ರ ಸಮಯದಲ್ಲಿ ಪ್ರಿಯಾಂಕಗೆ ಕರೆ ಮಾಡಿದ್ದು, ಫೋನ್ ಸ್ವಿಚ್ ಆಫ್ ಆಗಿದೆ.
ಇತ್ತ ಪತ್ನಿ ಬರುತ್ತಾಳೆಂದು ಕುಣಿಗಲ್ಗೆ ಪತಿ ರುದ್ರೇಶ್ ಬಂದು ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿದೆ. ಅನುಮಾನಗೊಂಡು ಸೌಮ್ಯ ಅವರಿಗೆ ಕರೆ ಮಾಡಿದ್ದು ಪರಿಚಯಸ್ಥರು ಸಿಕ್ಕಿದ್ದಾರೆ ಅವರ ಜೊತೆ ಹೋಗುತ್ತಿದ್ದೇನೆ ಎಂದು ಹೇಳಿದ್ದಳು ಅಷ್ಟೇ ಎಂದಿದ್ದಾರೆ. ಶುಕ್ರವಾರ ಬೇಲೂರು ಪೊಲೀಸರಿಗೆ ಕಂಪ್ಲೆಂಟ್ ಕೊಡಲು ಬಂದಿದ್ದು, ಅರೇಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ ಎಂದು ಕಳುಹಿಸಿದ್ದಾರೆ. ನಂತರ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿದೆ.
ಇಂದು ಬೆಳಿಗ್ಗೆ ಮತ್ತೆ ಪ್ರಿಯಾಂಕ ಪತಿ ಮನೆಯವರು ಕಲ್ಕೆರೆ ಬಳಿ ಬಂದು ಹುಡುಕಾಟ ನಡೆಸಿದಾಗ ಒಳವಸ್ತ್ರ, ಒಂದು ಚಪ್ಪಲಿ ಸಿಕ್ಕಿದೆ. ಅದರಿಂದ ಸ್ವಲ್ಪ ದೂರದಲ್ಲೇ ವ್ಯಾನಿಟಿ ಬ್ಯಾಗ್ ಬಿದ್ದಿದ್ದು ಪ್ರಿಯಾಂಕ ಕಣ್ಮೆರೆಯಾಗಿರುವ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಪ್ರಿಯಾಂಕ ಮೈಮೇಲೆ ಒಂದು ನೆಕ್ಲೆಸ್, ಎರಡು ಎಳೆ ಸರ, ಕಿವಿ ಓಲೆ, ಉಂಗುರ ಸೇರಿ 30 ಲಕ್ಷದ ಚಿನ್ನಾಭರಣವನ್ನು ಹಾಕಿದ್ದರು. ಇದರ ಆಸೆಗೆ ಕೊಲೆ ಮಾಡಿ ಕೆರೆಗೆ ಬಿಸಾಡಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.
ಶ್ವಾನದಳ, ಸೋಕೋ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಡ್ರೋನ್ ಮೂಲಕ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪ್ರಿಯಾಂಕ ಫೋನ್ ಕಡೆಯದಾಗಿ ಕಲ್ಕೆರೆ ಸಮೀಪವೇ ಸ್ವಿಚ್ ಆಫ್ ಆಗಿದ್ದು, ಆ ಮಾರ್ಗದ ಎಲ್ಲಾ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಿಯಾಂಕ ದಿಢೀರ್ ಕಣ್ಮೆರೆಯಿಂದ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.















