ಮನೆ ಪ್ರಕೃತಿ ಕೊಡಗಿನಲ್ಲಿ 7ನೇ ಬಾರಿ ನಡುಗಿದ ಭೂಮಿ: ಜನರಲ್ಲಿ ಹೆಚ್ಚಿದ ಆತಂಕ

ಕೊಡಗಿನಲ್ಲಿ 7ನೇ ಬಾರಿ ನಡುಗಿದ ಭೂಮಿ: ಜನರಲ್ಲಿ ಹೆಚ್ಚಿದ ಆತಂಕ

0

ಮಡಿಕೇರಿ(Madikeri): ಜಿಲ್ಲೆಯಲ್ಲಿ ವರುಣನ ಆರ್ಭಟದ ನಡುವೆ  7ನೇ ಬಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ ಹಾಗೂ ಕರಿಕೆಯಲ್ಲಿ ಭೂಮಿ ಮತ್ತೆ ನಡುಗಿದೆ. ಇಂದು ಮಧ್ಯಾಹ್ನ 1.20ರ ಸುಮಾರಿಗೆ ಭಾರಿ ಶಬ್ದದೊಂದಿಗೆ 3/4 ಸೆಕೆಂಡ್ ಭೂಮಿ​ ಕಂಪಿಸಿದೆ. ಕರಿಕೆ, ಪೆರಾಜೆ ಮಂಗಳೂರು ಗಡಿ ಭಾಗ ಬೆಟ್ಟ ಗುಡ್ಡಗಳಿಂದ ಕೂಡಿದೆ.ಇಲ್ಲಿ ಮಣ್ಣು ಕುಸಿತವಾದರೆ ಭಾರಿ ಅನಾಹುತ ಎದುರಾಗುವ ಸಂಭವ ಇದೆ. ಆದ್ದರಿಂದ ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಭೂಮಿ ಕಂಪನಕ್ಕೆ ನಿಖರವಾದ ಮಾಹಿತಿ ಅರಿತು, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸೇರಿಸುವ ಕೆಲಸ ಮಾಡಬೇಕೆಂಬ ಒತ್ತಾಯ ಹೆಚ್ಚಾಗಿದೆ.

ನಿವಾಸಿಗಳು ಅತಂತ್ರ: ಕುಶಾಲನಗರದಲ್ಲೂ ಮಳೆ ಆಗುತ್ತಿದೆ. ಇಲ್ಲಿನ ಸಾಯಿ ಲೇಔಟ್ ನಿವಾಸಿಗಳು ಅತಂತ್ರರಾಗಿದ್ದಾರೆ. ಬಹುತೇಕ ಮಂದಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಟ್ಟಿದ್ದ ಮನೆಗಳು ಮಳೆಗಾಲ‌ ಬಂದರೆ ನೀರಿನಲ್ಲಿ‌ ಮುಳುಗುತ್ತಿವೆ. ಮನೆ ಬಿಟ್ಟು ಎಲ್ಲಿಗೆ ಹೋಗುವುದು?, ಹೇಗೆ ಜೀವನ‌ ಮಾಡುವುದು ಎಂಬುದನ್ನು ತಿಳಿಯುವುದೇ ಕಷ್ಟವಾಗಿದೆ. ಮಳೆಗಾಲದಲ್ಲಿ ನಮ್ಮ ಗೋಳು ಕೇಳುವವರೇ ಇಲ್ಲ ಎಂದೂ ಇಲ್ಲಿನ ನಿವಾಸಿಗಳು ಗೋಳಾಡುತ್ತಿದ್ದಾರೆ.

ಧರೆಗುರುಳಿದ ಮರಗಳು: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಅಲ್ಲಲ್ಲಿ ರಸ್ತೆಗಳ‌ ಮೇಲೆ ಮರ ಬೀಳುತ್ತಿವೆ. ಅಲ್ಲದೇ, ಸಣ್ಣ-ಪುಟ್ಟ ಗುಡ್ಡಗಳು ಕೂಡ ಕುಸಿಯುತ್ತಿದ್ದು, ಜನರಿಗೆ ಆತಂಕ ಉಂಟಾಗಿದೆ.

ಮಂಗಳೂರು ರಸ್ತೆಯಲ್ಲಿ ಮಣ್ಣು ಕುಸಿದು ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.