ಮೈಸೂರು : ಮಹಿಳೆಯರಿಗೆ ಸ್ವಾವಲಂಬಿಗಳಾಗಲು ಪ್ರೋತ್ಸಾಹ ಕೊಟ್ರೆ ಅವರು ಎಂತಹ ಕಷ್ಟದ ಕೆಲಸವನ್ನಾದ್ರೂ ಮಾಡೋಕೆ ಸಿದ್ಧರಾಗ್ತಾರೆ. ಅದೇ ರೀತಿ ಮೈಸೂರಿನಲ್ಲಿ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣದತ್ತ ಗಮನಹರಿಸಿರುವ ಸಾವಿಯೋ ಟ್ರಸ್ಟ್ ಮಹತ್ವದ ಸಾಮಾಜಿಕ ಕಾರ್ಯವನ್ನು ಕೈಗೊಂಡಿದೆ. ಟ್ರಸ್ಟ್ ವತಿಯಿಂದ ನಗರದ 70 ಮಹಿಳೆಯರಿಗೆ ಉಚಿತವಾಗಿ ಆಟೋ ಚಾಲನಾ ತರಬೇತಿ ನೀಡಲಾಗುತ್ತಿದ್ದು, ಅವರ ಜೀವನದಲ್ಲಿ ಹೊಸ ದಾರಿಯನ್ನು ತೆರೆದಿದೆ.
ವಾಹನ ಚಾಲನೆ ಕಲಿಯಲು ಅನುಕೂಲ – ಈ ಯೋಜನೆಯಡಿ ತರಬೇತಿ ಪಡೆಯಲು ಇಚ್ಛಿಸುವ ಮಹಿಳೆಯರು ತಮ್ಮ ಫೋಟೋ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ತರಬೇತಿ ಆರಂಭಕ್ಕೂ ಮೊದಲು ಅವರಿಗೆ ಲರ್ನರ್ಸ್ ಲೈಸೆನ್ಸ್ (ಎಲ್ಎಲ್ಆರ್) ಮಾಡಿಸಿಕೊಡುವ ವ್ಯವಸ್ಥೆಯನ್ನು ಸಹ ಟ್ರಸ್ಟ್ ಮಾಡಿಕೊಟ್ಟಿದ್ದು, ಇದರಿಂದ ಮಹಿಳೆಯರಿಗೆ ಕಾನೂನುಬದ್ಧವಾಗಿ ವಾಹನ ಚಾಲನೆ ಕಲಿಯಲು ಅನುಕೂಲವಾಗಿದೆ.
ಆಟೋ ಖರೀದಿಸಲು ಸಹಾಯ – ತರಬೇತಿ ಪೂರ್ಣಗೊಳಿಸಿದ ಬಳಿಕ, ಶಿಶು ಮಂದಿರ್ ಹಾಗೂ ಹರ್ಬಲ್ ಲೈಫ್ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿಯೊಬ್ಬ ಮಹಿಳೆಗೆ ಸುಮಾರು 83 ಸಾವಿರ ಮೌಲ್ಯದ ಎಲೆಕ್ಟ್ರಿಕಲ್ ಆಟೋಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಅವರು ಸ್ವತಂತ್ರವಾಗಿ ಉದ್ಯೋಗ ಆರಂಭಿಸಿ, ತಮ್ಮ ಕುಟುಂಬದ ಆರ್ಥಿಕ ಸ್ಥಿತಿಗೆ ಬೆಂಬಲ ನೀಡಲು ಸಾಧ್ಯವಾಗುತ್ತಿದೆ.
ಸಮಗ್ರ ತರಬೇತಿ – ಆಟೋ ಖರೀದಿಗೆ ಬೇಕಾದ ಉಳಿದ ಮೊತ್ತವನ್ನು ಹಂತ ಹಂತವಾಗಿ ಪಾವತಿಸುವ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಮಹಿಳೆಯರ ಮೇಲೆ ಆರ್ಥಿಕ ಒತ್ತಡ ಕಡಿಮೆಯಾಗುವಂತೆ ಗಮನಹರಿಸಲಾಗಿದೆ. ತರಬೇತಿ ಅವಧಿಯಲ್ಲಿ ಸುರಕ್ಷಿತ ಚಾಲನೆ, ರಸ್ತೆ ನಿಯಮಗಳು, ವಾಹನ ನಿರ್ವಹಣೆ ಹಾಗೂ ಗ್ರಾಹಕ ಸೇವೆ ಕುರಿತಂತೆ ಸಮಗ್ರ ತರಬೇತಿ ನೀಡಲಾಗುತ್ತಿದೆ.
ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವ ಯೋಜನೆ – ಈ ಯೋಜನೆಯಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ತಮ್ಮದೇ ಆದ ಉದ್ಯೋಗದ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯುತ್ತಿದ್ದಾರೆ. ಹಲವು ಮಹಿಳೆಯರು ತಮ್ಮ ಕುಟುಂಬದ ಮುಖ್ಯ ಆಧಾರವಾಗುತ್ತಿರುವುದು ಗಮನಾರ್ಹವಾಗಿದೆ. ಸಾವಿಯೋ ಟ್ರಸ್ಟ್ ನ ಈ ಸೇವಾಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಇಂತಹ ಉಪಕ್ರಮಗಳು ಇನ್ನಷ್ಟು ಮಹಿಳೆಯರಿಗೆ ಪ್ರೇರಣೆಯಾಗಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.















