ಮನೆ ರಾಜ್ಯ ಮೈಸೂರು: ಕಬ್ಬಿನ ದರ ನಿಗದಿಗೆ ಒತ್ತಾಯಿಸಿ ರೈತರಿಂದ ಪ್ರತಿಭಟನಾ ಧರಣಿ

ಮೈಸೂರು: ಕಬ್ಬಿನ ದರ ನಿಗದಿಗೆ ಒತ್ತಾಯಿಸಿ ರೈತರಿಂದ ಪ್ರತಿಭಟನಾ ಧರಣಿ

0

ಮೈಸೂರು(Mysuru): ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿ ಹಾಗೂ ಕಬ್ಬು ಕಟಾವು ಸಾಗಾಣಿಕೆ ದರ ಶೋಷಣೆ  ನಿಯಂತ್ರಿಸಲು, ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ  ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಕಬ್ಬಿನ ಬೆಳೆಗೆ ಬಳಸುವ ರಸಗೊಬ್ಬರ, ಬೀಜ,  ಡೀಸೆಲ್, ಬೆಲೆ, ಕಟಾವು  ಕೂಲಿ ಸಾಗಾಣಿಕೆ ವೆಚ್ಚ ಏರಿಕೆಯಾಗಿರುವ ಕಾರಣ  ಪ್ರಸಕ್ತ ಸಾಲಿನ 2022 -23ರ ಸಾಲಿಗೆ ಕಬ್ಬಿನ ದರ ನಿಗದಿ ಮಾಡಬೇಕು ಉತ್ತರಪ್ರದೇಶದಲ್ಲಿ ರಾಜ್ಯ ಸಲಹಾ ಬೆಲೆ ಟನಗೆ ಕನಿಷ್ಠ  3500 ನಿಗದಿಪಡಿಸಲಾಗಿದೆ ಅದೇ ಮಾನದಂಡ ಅನುಸರಿಸಿ ರಾಜ್ಯದಲ್ಲಿಯೂ  ದರ ನಿಗದಿಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಜ್ಯದಲ್ಲಿ ಕಳೆದ ವರ್ಷ  ಸುಮಾರು 70 ಸಕ್ಕರೆ ಕಾರ್ಖಾನೆಗಳು 6. 50 ಕೋಟಿಯಷ್ಟು ಕಬ್ಬು ನುರಿಸಿವೆ. ಇವರ ಬಾಬ್ತು ರಾಜ್ಯದ ರೈತರಿಗೆ ಇನ್ನೂ  300 ಕೋಟಿಯಷ್ಟು ಎಪ್ ಆರ್ ಪಿ ಹಣ ಬಾಕಿ ಉಳಿದಿದೆ. ಬಾಕಿ ಹಣಕ್ಕೆ ಕಾನೂನು ಪ್ರಕಾರ ಶೇ. 15  ಬಡ್ಡಿ ಸೇರಿಸಿ ತಕ್ಷಣವೇ ಕೊಡಿಸಬೇಕು ಎಂದು ಒತ್ತಾಯಿಸಿದರು.

ಪ್ರಸಕ್ತ ಸಾಲಿನಲ್ಲಿ ಕಬ್ಬಿನ ಇಳುವರಿ ಹಾಗೂ ಪ್ರದೇಶ ಏರಿಕೆಯಾಗಿದೆ. ಈಗಾಗಲೇ ಬಣ್ಣಾರಿ ಸಕ್ಕರೆ ಕಾರ್ಖಾನೆಯವರು ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದಾರೆ. ಕಬ್ಬು ದರ ನಿಗದಿ ವಿಳಂಬವಾಗುವುದರಿಂದ ಕಾರ್ಖಾನೆಗಳು ರೈತರಿಗೆ ಹಣ ಪಾವತಿ ಕೂಡ ವಿಳಂಬ ಮಾಡುತ್ತಾರೆ. ಆದ್ದರಿಂದ ತಾವು ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕು  ಎಸ್ ಎ ಪಿ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರಕ್ಕೆ ಕಬ್ಬಿನ ಬೆಲೆ ನಿಗದಿ ಮಾಡಲು ಅವಕಾಶವಿರುತ್ತದೆ ಎಂಬುದನ್ನು ಮನಗಂಡು ತಕ್ಷಣವೇ ದರ ನಿಗದಿಪಡಿಸಬೇಕು  ಎಂದು ಮನವಿ ಮಾಡಿದರು.

ಪ್ರತಿಭಟನಾ ಧರಣಿಯ ನೇತೃತ್ವವಹಿಸಿ ಮಾತನಾಡಿದ  ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್,  ಇಂದಿನ ದಿನಗಳಲ್ಲಿ ಕಬ್ಬು ಕಲ್ಪವೃಕ್ಷವಾಗಿದೆ.  ಕಬ್ಬಿನಿಂದ ಎಥನಾಲ್,ವಿದ್ಯುತ್, ಮಧ್ಯ, ಗೊಬ್ಬರ, ಮತ್ತಿತರ ಉತ್ಪನ್ನಗಳನ್ನು ತಯಾರಿಸಿ ಕಾರ್ಖಾನೆಗಳು ಹೆಚ್ಚು ಹಣ ಸಂಪಾದಿಸುತ್ತಿವೆ. ಆದರೆ ರೈತ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿದ್ದಾನೆ. ಕಬ್ಬನ್ನು ನುರಿಸುವ ರೀತಿ ರೈತರನ್ನು ಅರೆಯುತ್ತಿದ್ದಾರೆ. ಇದು ನಿಲ್ಲಬೇಕಾದರೆ ಎರಡು ಜಿಲ್ಲೆಯಲ್ಲಿ 25000  ಕಬ್ಬು ಬೆಳೆಯುವ ಎಲ್ಲ ರೈತರು ಸಂಘಟನೆಯ ಅಡಿಯಲ್ಲಿ ಹೋರಾಟಕ್ಕೆ ಬರಬೇಕು ಆಗ ಮಾತ್ರ ನ್ಯಾಯ ಸಿಗಲು  ಸಾಧ್ಯ, ಸರ್ಕಾರವನ್ನು ಮಣಿಸಲು ಸಾಧ್ಯ, ರಾಜ್ಯದಲ್ಲಿ 74 ಕಾರ್ಖಾನೆಗಳು ಕಬ್ಬು ಅರೆಯುತ್ತಿವೆ. ಇನ್ನು 85 ಕಾರ್ಖಾನೆಗಳು, ರಹದಾರಿ ಗಾಗಿ ಅರ್ಜಿ ಸಲ್ಲಿಸಿವೆ ಏತಕ್ಕಾಗಿ ಎಂಬುದನ್ನು ರೈತರು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿವರ್ಷ ಕಬ್ಬಿನ ಕಟಾವು ಸಾಗಾಣಿಕೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಯವರು ಯಾವುದೇ ಮಾನದಂಡ ವಿಲ್ಲದೆ ರೈತರ ಹಣದಿಂದ ತಮ್ಮ ಮನಬಂದಂತೆ ಕಡಿತಗೊಳಿಸುತ್ತಿದ್ದಾರೆ. ಕಬ್ಬಿನ ಬಿಲ್ಲಿನಲ್ಲಿಯು ನೋಂದಾಯಿಸುತ್ತಿಲ್ಲ. ರೈತರಿಗೆ ಬಿಲ್ಲನ್ನು ಸಹ ನೀಡುತ್ತಿಲ್ಲ ಇದು  ರೈತರ ಶೋಷಣೆಯಾಗಿದೆ. ಕಬ್ಬು ನುರಿಸುವ ಹಂಗಾಮಿನ ಅಂತಿಮ ದಿನಗಳ ಕಟಾವ್ ಕೂಲಿ  ಒಂದು ಸಾವಿರ ರೂಪಾಯಿಗಿಂತ ಹೆಚ್ಚು ಕಟಾವು ವೆಚ್ಚ ರೈತರಿಂದ ಕಡಿತ ಮಾಡುತ್ತಿದ್ದಾರೆ, ಇದು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಕ್ಕರೆ ಕಾರ್ಖಾನೆಗಳು ಕಟಾವು ಕೂಲಿಕಾರರನ್ನು ಕರೆದುಕೊಂಡು ಬಂದು ಅವರ ಮೂಲಕ ಕಟಾವು ಮಾಡಿಸುತ್ತಿದ್ದಾರೆ ಅದೇ ರೀತಿ ಲಾರಿ ಮತ್ತು ಟ್ಯಾಕ್ಟರ್ ಗಳನ್ನು ಕಾರ್ಖಾನೆ  ವತಿಯಿಂದ ಗುತ್ತಿಗೆ ಪಡೆದು ಸಾಗಣೆ ಮಾಡಿಸಿಕೊಳ್ಳುತ್ತಿದ್ದಾರೆ ಇದರ ಸಂಪೂರ್ಣ ಉಸ್ತುವಾರಿ  ನಿಯಂತ್ರಣ ವ್ಯವಸ್ಥೆ ಸಕ್ಕರೆ ಕಾರ್ಖಾನೆ ಮಾಲೀಕರ ಹಂಗಿನಲ್ಲಿ ಇರುವ ಕಾರಣ ಕಬ್ಬಿನ ಎಪ್ ಆರ್ ಪಿ ದರವನ್ನು ರೈತರ ಹೊಲದಲ್ಲಿನ ದರ  ಎಂದು ನಿಗದಿ ಮಾಡಿದರೆ ರೈತರಿಗೆ  ಸಮಸ್ಯೆ ತಪ್ಪುತ್ತದೆ ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಬ್ಬಿನ ಬೆಳೆಗೆ ಬೆಳೆ ವಿಮೆ  ಯೋಜನೆ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

15 ದಿನದಲ್ಲಿ ಕಬ್ಬಿನ ದರ ನಿಗದಿ ಆಗದಿದ್ದರೆ ವಿಧಾನಸೌಧ ಮುತ್ತಿಗೆಗೆ ರಾಜ್ಯದ 20 ಲಕ್ಷ ಕಬ್ಬು ಬೆಳೆಗಾರರು ಸಿದ್ಧರಾಗಬೇಕು ಎಂದು ಎಚ್ಚರಿಸಿದರು.

ಪ್ರತಿಭಟನೆ ಧರಣಿಯಲ್ಲಿ ಹತ್ತಳ್ಳಿ ದೇವರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪಿ ಸೋಮಶೇಖರ್, ಕೆರೆಹುಂಡಿ ರಾಜಣ್ಣ, ಕಿರಗಸುರ್ ಶಂಕರ ಕೂಡನಹಳ್ಳಿ  ರಾಜಣ್ಣ, ತಾಲೂಕ ಅಧ್ಯಕ್ಷರುಗಳಾದ  ಕುರುಬೂರು ಸಿದ್ದೇಶ್, ಆಡರವಿ,  ಲಕ್ಷ್ಮಿಪುರ ವೆಂಕಟೇಶ್, ಬಿದರಳ್ಳಿ ಮಾದಪ್ಪ, ಬರಡನಪುರ ನಾಗರಾಜ್ ದೇವಮಣಿ, ವರಕೋಡು  ನಾಗೇಶ್, ಅಂಬಳೆ ಮಂಜುನಾಥ್, ಮಾದಪ್ಪ ತರಕಾರಿ ಲಿಂಗರಾಜ್, ಪಿ ರಾಜು, ಮಹದೇವ್,ರೇವಣ್ಣ, ವಿಜಯೇಂದ್ರ, ಇನ್ನು ಮುಂತಾದ  ನೂರಾರು ರೈತರು ಇದ್ದರು.