ಮನೆ ರಾಜ್ಯ ನರೇಗಾ ಯೋಜನೆಯಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿ: ಶಾಸಕ ಜಿ.ಟಿ.ದೇವೇಗೌಡ

ನರೇಗಾ ಯೋಜನೆಯಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿ: ಶಾಸಕ ಜಿ.ಟಿ.ದೇವೇಗೌಡ

0

ಮೈಸೂರು(Mysuru): ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿಗೊಳಪಡುವ ಗ್ರಾಮಗಳ ಅಭಿವೃದ್ಧಿ ಪೂರಕವಾಗುವಂತೆ ರೈತರು ಹಾಗೂ ಜನರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೊಳ್ಳುಬೇಕು ಎಂದು ಶಾಸಕರಾದ ಜಿ.ಟಿ.ದೇವೇಗೌಡ ಅವರು ತಿಳಿಸಿದರು.

ಮೈಸೂರು ತಾಲ್ಲೂಕಿನ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮದಲ್ಲಿರುವ ಸ್ಮಶಾನಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಬೇಕು. ಜಾಗದ ಸಮಸ್ಯೆ ಇರುವ ಗ್ರಾಮದಲ್ಲಿ ಅವಶ್ಯಕವಿರುವಷ್ಟು ಜಾಗ ಗುರುತಿಸಿ ಹೊಸದಾಗಿ ಸ್ಮಶಾನ ನಿರ್ಮಿಸಬೇಕು ಎಂದು ಹೇಳಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೈತರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂಥ ಅನೇಕ ಸೌಲಭ್ಯಗಳಿವೆ. ಅದನ್ನು ಜನರಿಗೆ ತಲುಪುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಈ ಮುಖೇನ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚಿಸಿದರು.

ಹಳ್ಳಿಗಳಲ್ಲಿ ಪ್ರಮುಖ ಜಲಮೂಲಗಳಾದ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ನರೇಗಾ ಯೋಜನೆಯಡಿ ಉತ್ತಮವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಆಯಾ ಗ್ರಾಮದ ಜನರು ಯೋಜನೆಯಡಿ ಹೆಚ್ಚಿ‌ನ ಸೌಲಭ್ಯ ಪಡೆಯಬೇಕು. ತಮ್ಮ ಗ್ರಾಮದ ಕೆರೆ, ಕಟ್ಟೆ ಅಭಿವೃದ್ಧಿ ಕಾಮಗಾರಿಯಲ್ಲಿ ಪಾಲ್ಗೊಂಡು ಉದ್ಯೋಗ ಪಡೆಯಬೇಕು ಎಂದು ತಿಳಿಸಿದರು.

ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ನರೇಗಾ ಯೋಜನೆಯಡಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೆರವಾಗುವಂತೆ ಅಚ್ಚುಕಟ್ಟಾದ ಮೆಂಟ್ಲಿಂಗ್ ರಸ್ತೆ ನಿರ್ಮಿಸಬೇಕು. ನೀರಾವರಿ ಸೌಲಭ್ಯಗಳಿಗೆ ತೊಡಕಾಗದಂತೆ ನಾಲೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು ಎಂದು ಹೇಳಿದರು.

ಶಾಲೆಗಳಲ್ಲಿ ಸುಸಜ್ಜಿತ ಶೌಚಾಲಯ, ಶಾಲಾ ಕಾಂಪೌಂಡ್ ನಿರ್ಮಿಸಲು ಕ್ರಮವಹಿಸಿ. ಗ್ರಾಮದ ಪ್ರತೀ ಮನೆಯಲ್ಲಿ ಶೌಚಾಲಯ, ಸೋಕ್ ಫೀಟ್ ನಿರ್ಮಿಸಿ ಸ್ವಚ್ಛತೆ ಕಾಪಾಡುವಂಥೆ ಅರಿವು ಮೂಡಿಸಬೇಕು. ಪ್ರತಿಯೊಂದು ಬಡ ಕುಟುಂಬವು ನರೇಗಾ ಯೋಜನೆಯ ಸೌಲಭ್ಯಕ್ಕೆ ಮನವಿ ಮಾಡಿದರೆ ಸಕಾರಾತ್ಮಕವಾಗಿ ಸ್ಪಂದಿಸಿ ಎಂದು ಹೇಳಿದರು.

ಸಭೆಯಲ್ಲಿ ಉಪ ಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯತ್ ಆಡಳಾಧಿಕಾರಿ ಡಾ.ಎಸ್.ಪ್ರೇಮ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ರಮೇಶ್, ತಹಶಿಲ್ದಾರ್ ಗಿರೀಶ್, ಸಹಾಯಕ ನಿರ್ದೇಶಕರಾದ ಕೆ.ಎಂ.ರಘುನಾಥ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.