ಹಾವೇರಿ : ಸರ್ಕಾರಿ ಬಸ್ಸೊಂದು ವೇಗವಾಗಿ ಬಂದು ಬೇಕರಿಗೆ ನುಗ್ಗಿದ ಪರಿಣಾಮ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹಾವೇರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಸವಣೂರು ಪಟ್ಟಣದ ಹಜರತ್ ಅಲಿ ಎಂಬ 2 ವರ್ಷ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಬಂಕಾಪುರ ಪಟ್ಟಣದ ನಿವಾಸಿಗಳಾದ ವಾಸುದೇವ (44), ಹರ್ಷಾ (6) ಹಾಗೂ ಕಾವ್ಯಾಂಜಲಿ (39) ಎಂಬುವವರು ಗಾಯಗೊಂಡಿದ್ದಾರೆ.
ಇಂದು (ಏ.1) ಬೆಳಿಗ್ಗೆ 7ರ ಸುಮಾರಿಗೆ ಹಾವೇರಿಯಿಂದ ಲಕ್ಷ್ಮೇಶ್ವರ ಹೋಗುವ ನಾನ್ ಸ್ಟಾಪ್ ಕೆಎಸ್ಆರ್ಟಿಸಿ ಬಸ್ ಬೇಕರಿಗೆ ನುಗ್ಗಿದೆ. ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ಲಾಟಫಾರ್ಮ್ ಮೇಲೆ ಜನ ನಿಂತಿದ್ದರು. ಈ ವೇಳೆ ಬಸ್ ಚಾಲಕ ವೇಗವಾಗಿ ಬಂದು ಪ್ಲಾಟಫಾರ್ಮ್ ಮೇಲಿಂದ ಹಾದು ಬೇಕರಿಗೆ ನುಗ್ಗಿದೆ. ಪರಿಣಾಮ ಅಲ್ಲೇ ನಿಂತಿದ್ದ ಮಗು ಹಾಗೂ ಕೆಲವರ ಮೇಲೆ ಬಸ್ ಹಾದುಹೋಗಿದೆ.
ಪರಿಣಾಮ ಮಗು ಗಂಭೀರವಾಗಿ ಗಾಯಗೊಂಡಿದೆ. ಕೂಡಲೇ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಮೂವರು ಗಾಯಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕ ಘಟನೆ ಬಳಿಕ ಪರಾರಿಯಾಗಿದ್ದಾನೆ.
ಅಪಘಾತದ ದೃಶ್ಯ ನಿಲ್ದಾಣದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನ್ನುವಂತಿದೆ. ಪೊಲೀಸರ ಮಾಹಿತಿ ಪ್ರಕಾರ, ನಿಲ್ದಾಣದಲ್ಲಿ ಬಸ್ ಬಂದ ತಕ್ಷಣ ಯಾವ ಊರಿಗೆ ತೆರಳಲಿದೆ ಎಂದು ಬೋರ್ಡ್ ನೋಡಲು ಬಂದವರ ಮೇಲೆ ಬಸ್ ಹಾದು ಹೋಗಿದೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.















