ಮನೆ ರಾಜ್ಯ ಪ್ರವಾಸಿಗರು, ಭಕ್ತರ ಮೇಲೆ ದಾಳಿ ಮಾಡಿದ ವಾನರ ಸೇನೆ – 15ಕ್ಕೂ ಹೆಚ್ಚು ಜನರಿಗೆ ತೀವ್ರ...

ಪ್ರವಾಸಿಗರು, ಭಕ್ತರ ಮೇಲೆ ದಾಳಿ ಮಾಡಿದ ವಾನರ ಸೇನೆ – 15ಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯ

0

ಕೋಲಾರ : ಬಿರು ಬೇಸಿಗೆ ಆರಂಭವಾಗುತ್ತಿದ್ದಂತೆ ಅನ್ನ ನೀರು ಸಿಗದ ಹಿನ್ನೆಲೆ, ಪ್ರವಾಸಿಗರು, ಭಕ್ತರ ಮೇಲೆ ವಾನರ ಸೈನ್ಯ ದಾಳಿ ಮಾಡಿದ ಪರಿಣಾಮ 15ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಹೊರವಲಯದಲ್ಲಿರುವ ದಕ್ಷಿಣ ಕಾಶಿ ಅಂತರಗಂಗೆ ಕ್ಷೇತ್ರದಲ್ಲಿ ಕೋತಿಗಳ ದಾಳಿಯಿಂದ ಗಾಯಗೊಂಡು 15ಕ್ಕೂ ಹೆಚ್ಚು ಜನರು ಆಸ್ಪತ್ರೆ ಪಾಲಾಗಿದ್ದಾರೆ. ಹಲವರನ್ನ ತೀವ್ರವಾಗಿ ಕಚ್ಚಿ ಗಾಯಗೊಳಿಸಿರುವ ಮಂಗಗಳು ತಮ್ಮ ಹಸಿವಿನ ದಾಳಿ ಮುಂದುವರಿಸಿವೆ. ಅಂತರಗಂಗೆ ತಪ್ಪಲಿನಲ್ಲಿರುವ ಸಾವಿರಾರು ಕೋತಿಗಳು ಇಲ್ಲಿಗೆ ಬರುವ ಪ್ರವಾಸಿಗರ ಮೇಲೆ ಎರಗಲಾರಂಭಿಸಿವೆ. ಕೋತಿಗಳ ದಾಳಿಯಿಂದ ತೀವ್ರ ಗಾಯಗಳಾಗಿರುವ ಪ್ರವಾಸಿಗರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಹಾರ, ನೀರು ಸಿಗದ ಕಾರಣ ಇಲ್ಲಿಗೆ ಬರುವವರು, ಇಲ್ಲಿ ಕೆಲಸ ಮಾಡುವವರನ್ನ ಕೋತಿಗಳು ಕಚ್ವಿ ಗಾಯಗೊಳಿಸಿವೆ. ಅಂತರಗಂಗೆಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಹಿಳೆ ಅಶ್ವಿನಿ ತಲೆಗೆ ಕೋತಿಗಳು ಕಚ್ಚಿ ಗಾಯಗೊಳಿಸಿವೆ. ಈ ಪರಿಣಾಮ ತಲೆಗೆ ನಾಲ್ಕು ಸ್ಟಿಚ್ ಹಾಕಲಾಗಿದೆ. ಇನ್ನೂ ಇಲ್ಲಿರುವ ಪ್ರವಾಸಿ ಮಿತ್ರ ಶ್ರೀನಾಥ್ ಎಂಬವರ ಕೈಗೆ ಗಾಯ, ಟೇಕಲ್ ಮೂಲದ ಮಹಿಳೆಯ ಕೆನ್ನೆ ಹಾಗೂ ಕೈ ಗಾಯಗೊಳಿಸಿರುವ ವಾನರ ಸೇನೆ ತನ್ನ ಕೃತ್ಯ ಮುಂದುವರೆಸಿವೆ.

ಬೆಂಗಳೂರು ಮೂಲದ ಭವ್ಯವೆಂಬ ಮಹಿಳೆ ಕಿವಿಯನ್ನ ಕಚ್ಚಿರುವ ಕೋತಿಗಳು ಸುಮಾರು 15ಕ್ಕೂ ಹೆಚ್ಚು ಜನರನ್ನ ಕಚ್ಚಿ ಗಾಯಗೊಳಿಸಿವೆ. ಇನ್ನೂ ಮುಜರಾಯಿ, ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಬರುವ ಅಂತರಗಂಗೆಯಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಆಹಾರ, ಕುಡಿಯುವ ನೀರು ಸಿಗದ ಕಾರಣ ಇಲ್ಲಿರುವ ಕಾಡು ಪ್ರಾಣಿಗಳು ಹಾಗೂ ವಾನರ ಸೇನೆ, ರೌಡಿಗಳಂತೆ ವರ್ತನೆ ತೋರುತ್ತಿವೆ. ಅನ್ನ ನೀರಿಗಾಗಿ ಜಿಲ್ಲಾಡಳಿತ ಬದಲಿ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.