ಇಂಪಾಲ : ಮಣಿಪುರದಲ್ಲಿ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆದಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮಣಿಪುರದ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ತಾಯಿ ಗಾಯಗೊಂಡಿದ್ದಾರೆ.
ಕುಕಿ ಉಗ್ರಗಾಮಿಗಳಿಂದ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ಚುರಚಂದ್‌ಪುರದ ಬೆಟ್ಟ ಪ್ರದೇಶಗಳ ಬಳಿ ಇರುವ ತಗ್ಗು ಪ್ರದೇಶವಾದ ಮೊಯಿರಾಂಗ್ ಟ್ರೋಂಗ್ಲಾಬಿ, 2023 ಮತ್ತು 2024ರಲ್ಲಿ ಪದೇ ಪದೇ ಗುಂಡಿನ ಚಕಮಕಿ ನಡೆದಿವೆ. ಇತ್ತೀಚಿನ ಈ ದಾಳಿಯು ಜನರನ್ನ ಭಯಭೀತರನ್ನಾಗಿಸಿದೆ.
ಈ ಘಟನೆಯನ್ನು ಸ್ಥಳೀಯ ಶಾಸಕಿ ಥೋಂಗಮ್ ಖಂಡಿಸಿದ್ದು, ಶಾಂತಿಯನ್ನ ಕಾಪಾಡುವಂತೆ ಹೇಳಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಪರಿಸ್ಥಿತಿಯನ್ನ ಹತೋಟಿಗೆ ತರಲು ಬಿಷ್ಣುಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ನಿವಾಸಿಗಳು ಹಿಂಸಾಚಾರ ನಡೆಸದೆ ಶಾಂತವಾಗಿರಲು ಅಧಿಕಾರಿಗಳು ಮನವಿ ಮಾಡಿದ್ದಾರೆ. ಮುನ್ನೆಚ್ಚರಿಕೆಯಾಗಿ ಬಿಷ್ಣುಪುರ ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.















