ಮನೆ ರಾಜ್ಯ ಅಭಿವೃದ್ಧಿ ಚರ್ಚೆ: ಜಿಲ್ಲಾ ಕಾಂಗ್ರೆಸ್ ನಿಂದ ಸಂಸದರ ಕಚೇರಿಗೆ ಹಂದಿ, ಕತ್ತೆಗಳ ಮೆರವಣಿಗೆ

ಅಭಿವೃದ್ಧಿ ಚರ್ಚೆ: ಜಿಲ್ಲಾ ಕಾಂಗ್ರೆಸ್ ನಿಂದ ಸಂಸದರ ಕಚೇರಿಗೆ ಹಂದಿ, ಕತ್ತೆಗಳ ಮೆರವಣಿಗೆ

0

ಮೈಸೂರು(Mysuru):  ಮೈಸೂರು ಅಭಿವೃದ್ಧಿಗೆ ಪ್ರತಾಪ್ ಸಿಂಹ ಕೊಡುಗೆ ಕುರಿತು ಚರ್ಚೆ ನಡೆಸಲು ಹಂದಿ,‌ ಕತ್ತೆಗಳ ಮೆರವಣಿಗೆ ಮೂಲಕ ಸಂಸದರ ಕಚೇರಿಗೆ ತೆರಳುತ್ತಿದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಕಾಂಗ್ರೆಸ್ ಕಾರ್ಯಕರ್ತರು ಹಂದಿ,‌ ಕತ್ತೆಗಳ ಮೆರವಣಿಗೆ ಮೂಲಕ ವಿಭಿನ್ನವಾಗಿ ಪ್ರತಿಭಟಿಸಲು ಮುಂದಾಗಿದ್ದರು.  ಅಂತೆಯೇ ಮೆರವಣಿಗೆ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಿ.ದಾಸಪ್ಪ ವೃತ್ತಕ್ಕೆ‌ ಬರುತ್ತಿದ್ದಂತೆಯೇ, ಪೊಲೀಸರು ತಡೆದರು.

ಈ ವೇಳೆ‌ ಪೊಲೀಸರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.ಅಂತಿಮವಾಗಿ ಲಕ್ಷ್ಮಣ್ ಅವರನ್ನು ಕರೆದೊಯ್ಯುವುದಾಗಿ ತಿಳಿಸಿ ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ‘ಮೈಸೂರು ಬೆಂಗಳೂರು ದಶಪಥ ಹೆದ್ದಾರಿ, ಜಿಲ್ಲಾಸ್ಪತ್ರೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೊಳಿಸಲಾಗಿದೆ. ಆದರೆ, ಸಂಸದರು ತಾವೇ ಕೆಲಸ ಮಾಡಿದ್ದೆಂದು ಮಾಧ್ಯಮಗಳ ಮುಂದೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ‌ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೆವು. ಆದರೆ, ಕತ್ತೆ, ಹಂದಿ‌ಗಳ ಜೊತೆಗೆ ಚರ್ಚೆ ನಡೆಸುವುದಿಲ್ಲ ಎಂದು ಪ್ರತಾಪಸಿಂಹ ತಿಳಿಸಿದ್ದರು.

ಈ ಕಾರಣದಿಂದ ಕತ್ತೆ, ಹಂದಿ ಮೂಲಕ ಮೆರವಣಿಗೆಯಲ್ಲಿ ಸಾಗಿ ಅವರ ಕಚೇರಿಯಲ್ಲಿ ಸಂವಾದ ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.

ಮಡಿವಾಳ ಸಮುದಾಯದ ನಿಂದಿಸಿರುವ ಪ್ರತಾಪ್ ಸಿಂಹ:  

ಹಂದಿ ವಿಜಯನಗರ ಸಾಮ್ರಾಜ್ಯದ ಲಾಂಛನ. ಕತ್ತೆ ಮಡಿವಾಳ ಸಮುದಾಯದವರ ಜೀವನಾಡಿ. ಈ ಪ್ರಾಣಿಗಳ ವಿರುದ್ಧ ಕೇವಲವಾಗಿ ಮಾತನಾಡಿ, ಸಮುದಾಯಗಳಿಗೆ ಸಂಸದರು ಅವಮಾನ ಮಾಡಿದ್ದಾರೆ. ಸಾಂಕೇತಿಕವಾಗಿ ಕತ್ತೆ, ಹಂದಿಗಳ ಮೂಲಕ ಸಂಸದರ ಕಚೇರಿಗೆ ಮೆರವಣಿಗೆ ನಡೆಸಿದ್ದೇವೆ.

ರೌಡಿ ಶೀಟರ್ ಗಳ ಮೂಲಕ ಪ್ರತಾಪ ಸಿಂಹ ಅವರು ಬೆಂಬಲಿಗರ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು‌ ಈ ವೇಳೆ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ‌ಬಿ.ಜೆ. ವಿಜಯಕುಮಾರ್, ನಗರ ಘಟಕದ‌ ಅಧ್ಯಕ್ಷ ‌ಮೂರ್ತಿ ಇದ್ದರು.