ಮನೆ ಮಠ ಮೈಸೂರು ಅರಮನೆಯಲ್ಲಿರುವ ಅದ್ಭುತ ದೇವಾಲಯಗಳು

ಮೈಸೂರು ಅರಮನೆಯಲ್ಲಿರುವ ಅದ್ಭುತ ದೇವಾಲಯಗಳು

0

ಕರ್ನಾಟಕ ಪಾರಂಪರಿಕ ರಾಜಧಾನಿಯಾದ ಮೈಸೂರು ನಗರದಲ್ಲಿರುವ ಮೈಸೂರಿನ ಅರಮನೆ ವಿಶ್ವ ವಿಖ್ಯಾತಿ ಗಳಿಸಿದೆ. ಇದು ಅದ್ಭುತವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ವರ್ಷಕ್ಕೆ ಸುಮಾರು ೫ ಮಿಲಿಯನ್ ಗಿಂತಲೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಸುಂದರವಾದ ಅರಮನೆಯನ್ನು ಕಾಣಲು ಭೇಟಿ ಮಾಡುತ್ತಾರೆ. ಅರಮನೆಯು ವಿಶಾಲವಾದ ಮೈದಾನ ಹೊಂದಿದ್ದು, ಕೆಲವು ವಿಶಿಷ್ಟ ದೇವಾಲಯಗಳು ಕೂಡ ಇವೆ. ಹಿಂದೆ ಮೈಸೂರು ಸಂಸ್ಥಾನವಿದ್ದಾಗ ಮೈಸೂರು ಅರಸರು ಈ ದೇವಾಲಯಗಳಿಗೆ ಭೇಟಿ ನೀಡಿ ಪೂಜಿಸುತ್ತಿದ್ದರು.

ಇವರು ಶುಭ ಕಾರ್ಯಗಳಲ್ಲಿ ಈ ದೇವಾಲಯಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುವುದು ರಾಜ ಮನೆತನದವರ ಸಂಪ್ರದಾಯವಾಗಿತ್ತು. ಇಂದಿಗೂ ಈ ಪರಂಪರೆ ಮುಂದುವರೆದಿದೆಯಾದರೂ ಕೂಡ ಪ್ರಸ್ತುತ ದೇವಾಲಯಗಳಿಗೆ ಪ್ರವಾಸಿಗರು, ಸಾರ್ವಜನಿಕರು ಭೇಟಿ ನೀಡಬಹುದಾಗಿದೆ.

ಶ್ವೇತ ವರಹಸ್ವಾಮಿ ದೇವಾಲಯ: ಇದೊಂದು ಅದ್ಭುತವಾದ ದೇವಾಲಯವಾಗಿದ್ದು, ಮೈಸೂರು ಸಂಸ್ಥಾನದ ಚಿಕ್ಕ ದೇವರಾಜ ಒಡೆಯರ್ ಅವರ ಆಡಳಿತವಿದ್ದ ಸಂದರ್ಭದಲ್ಲಿ ಈ ಶ್ವೇತ ವರಹಸ್ವಾಮಿ ದೇವಾಲಯವನ್ನು ನಿರ್ಮಾಣ ಮಾಡಲಾಯಿತು. ಹೊಯ್ಸಳ ಶೈಲಿಯಲ್ಲಿ ಇರುವ ಈ ದೇವಾಲಯವು ಅಪೂರ್ವವಾದ ಸೊಬಗನ್ನು ಇಲ್ಲಿ ಪ್ರವಾಸಿಗರು ಕಾಣಬಹುದು. ಇಲ್ಲಿನ ಗೋಪುರ, ಶಿಲ್ಪಕಲೆ, ಕೆತ್ತನೆ ಹಾಗು ಅಲಂಕಾರಿಕ ಸ್ತಂಭಗಳಿಂದ ಈ ದೇವಾಲಯವು ಮತ್ತಷ್ಟು ಆಕರ್ಷಿಸುತ್ತದೆ. ಇನ್ನೊಂದು ಉಲ್ಲೇಖದ ಪ್ರಕಾರ, ಮೈಸೂರಿನ ಮೊದಲ ದಿವಾನರಾಗಿದ್ದ ದಿವಾನ್ ಪೂರ್ಣಯ್ಯನವರಿಂದ ಕೃಷ್ಣರಾಜ ಒಡೆಯರ್ ಅವರಿಗಿದ್ದ ಆಸೆಯ ಫಲವಾಗಿ ಈ ಅದ್ಭುತವಾದ ದೇವಾಲಯವನ್ನು ನಿರ್ಮಾಣ ಮಾಡಿದರು ಎನ್ನಲಾಗಿದೆ.

ಲಕ್ಷ್ಮೀರಮಣ ಸ್ವಾಮಿ ದೇವಾಲಯ: ೨ ನೇ ಚಾಮರಾಜ ಒಡೆಯರ್ ೧೪೭೮ ರಿಂದ ೧೫೧೩ ಸಮಯದಲ್ಲಿ ಈ ದೇವಾಲಯವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಈ ದೇವಾಲಯದಲ್ಲಿ ಕಂಡು ಬರುವ ದೇವಾಲಯಗಳಲ್ಲೇ ಅತ್ಯಂತ ಪುರಾತನವಾದುದು ಎಂದರೆ ಅದು ಲಕ್ಷ್ಮೀರಮಣ ಸ್ವಾಮಿ ದೇವಾಲಯ. ಈ ದೇವಾಲಯವು ಮೈಸೂರು ಅರಮನೆಯ ಇತಿಹಾಸದಲ್ಲಿಯೇ ಮಹತ್ವದ ಸ್ಥಾನವನ್ನು ಪಡೆದಿದೆ. ಇದಕ್ಕೆ ಮುಖ್ಯವಾದ ಕಾರಣ, ೩ ನೇ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕದ ವಿಧಿ-ವಿಧಾನಗಳು ನಡೆದದ್ದು ಈ ದೇವಾಲಯದಲ್ಲಿಯೇ.

ತ್ರಿನಯನೇಶ್ವರಸ್ವಾಮಿ ದೇವಾಲಯ: ರಾಜಾ ಒಡೆಯರ್ ಅವರ ಆಡಳಿತ ಸಮಯಕ್ಕೂ ಮುಂಚೆಯೇ ಈ ದೇವಾಲಯದ ನಿರ್ಮಾಣವಾಗಿತ್ತು. ಒಂದನೇಯ ಕಂಠೀರವ ನರಸರಾಜರ ಆಡಳಿತದಲ್ಲಿ ಅರಮನೆ ಆವರಣದಲ್ಲಿ ವಿಸ್ತರಿಸಲಾಯಿತು. ಮೊದಲು ಇದರ ನಿರ್ಮಾಣವಾದಾಗ ಇದು ಅರಮನೆ ಮೈದಾನದ ಹೊರಗಿತ್ತು. ಹೀಗಾಗಿ ಈ ದೇವಾಲಯವು ಅರಮನೆಯ ಆವರಣದೊಳಗಿನ ದೇಗುಲಗಳಲ್ಲಿ ಒಂದಾಯಿತು. ಇಲ್ಲಿಗೂ ಕೂಡ ಅನೇಕ ಪ್ರವಾಸಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ: ಅರಮನೆಯ ಆವರಣದಲ್ಲಿರುವ ಇನ್ನೊಂದು ದೇವಾಲಯವೆಂದರೆ ಅದು ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ. ಈ ದೇವಾಲಯದಲ್ಲಿ ದೊರೆತಿರುವ ಶಾಸನದಲ್ಲಿ ಒಡೆಯರ್ ಮನೆತನದವರ ಯದು ವಂಶದೊಂದಿಗಿರುವ ನಂಟನ್ನು ತಿಳಿಯಬಹುದಾಗಿದೆ. ಇಲ್ಲಿ ಅಂಬೆಗಾಲಿಟ್ಟು ಸಾಗುತ್ತಿರುವ ಬಾಲ ಕೃಷ್ಣನ ಚಿತ್ರಗಳು, ೪೦ ಕಂಚಿನ ದೇವ ದೇವತೆಯರ, ಸಂತರ ವಿಗ್ರಹಗಳನ್ನು ಇಲ್ಲಿ ಕಾಣಬಹುದು. ಹಾಗೆಯೇ ೧೯ ನೇ ಶತಮಾನದ ಮೂರಲ್ ಶೈಲಿಯ ವರ್ಣಚಿತ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಗಾಯಿತ್ರಿ ದೇವಿ ದೇವಾಲಯ: ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಕೊನೆಯದಾಗಿ ನಿರ್ಮಿಸಲಾದ ೨ ದೇವಾಲಯಗಳಲ್ಲಿ ಇದು ಒಂದು. ಒಂದು ಭುವನೇಶ್ವರಿಯ ದೇವಾಲಯವಾದರೆ ಇನ್ನೊಂದು ಗಾಯಿತ್ರಿದೇವಿಯ ದೇವಾಲಯ. ಇನ್ನೊಂದು ವಿಷಯವೆಂದರೆ ಇಲ್ಲಿನ ದೇವಾಲಯಗಳಲ್ಲಿ ಮಹಾಲಕ್ಷ್ಮೀ ಹಾಗು ಶ್ವೇತ ವರಹಸ್ವಾಮಿ ದೇವಾಲಯಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ದೇವಾಲಯಗಳು ದ್ರಾವಿಡ ಶೈಲಿಯಲ್ಲಿವೆ.