ಮನೆ ಸುದ್ದಿ ಜಾಲ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ದ ವಂಚನೆ ಪ್ರಕರಣ ದಾಖಲು: ಸಚಿವ ಬಿ.ಸಿ.ಪಾಟೀಲ್

ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ದ ವಂಚನೆ ಪ್ರಕರಣ ದಾಖಲು: ಸಚಿವ ಬಿ.ಸಿ.ಪಾಟೀಲ್

0

ಮೈಸೂರು (Mysuru): ಕಳಪೆ ಬಿತ್ತನೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವವರ ವಿರುದ್ದ ವಂಚನೆ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.
ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ, ಜಾಗೃತ ಕೋಶದ ಜಂಟಿ ನಿರ್ದೇಶಕರ ವಿಭಾಗೀಯ ಕಛೇರಿಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಇಂತಹ ಪ್ರಕರಣಗಳನ್ನು ದಾಖಲಿಸಲು ಕೃಷಿ ಜಾಗೃತ ಕೋಶವನ್ನು ಸ್ಥಾಪಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ವಾರ್ಷಿಕ ಸುಮಾರು 22 ಸಾವಿರ ಕೋಟಿ ರೂ.ಗಳ ಕೃಷಿ ಪರಿಕರಗಳು, ಬಿತ್ತನೆ ಬೀಜಗಳು, ಕೀಟನಾಶಕಗಳ ವಹಿವಾಟು ನಡೆಯುತ್ತದೆ. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ದೊರೆಯದೆ ಹೋದರೆ ಅವನ ಒಂದು ವರ್ಷದ ಶ್ರಮದ ಜೊತೆಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ರೈತರು ದೇಶದ ಬೆನ್ನೆಲುಬು ಆದ್ದರಿಂದ ಯಾರು ಸಹ ಕೃಷಕರಿಗೆ ಮೋಸ ಮಾಡಬಾರದು ಎಂದು ಮನವಿ ಮಾಡಿದರು.
ಎರಡುವರೆ ವರ್ಷಗಳಲ್ಲಿ 27 ಕೋಟಿಯ ಕಳಪೆ ಬಿತ್ತನೆ ಬೀಜಗಳು, ಕೀಟನಾಶಕಗಳನ್ನು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಕೀಟನಾಶಕ ಅಂಶಗಳು ಕಂಡುಬಂದ ಜೈವಿಕ ಉತ್ಪನ್ನಗಳ ಕುರಿತು 282 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಜಾಗೃತ ಕೋಶದಿಂದ ದಾಖಲಿಸಲ್ಪಟ್ಟ 26 ಪ್ರಕರಣಗಳಲ್ಲಿ ನ್ಯಾಯಾಲಯ 15.55 ಲಕ್ಷಗಳ ದಂಡವನ್ನು ಮಾರಾಟಗಾರರಿಗೆ / ಉತ್ಪಾದಕರಿಗೆ ವಿಧಿಸಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳ ಆದೇಶ/ಕಾಯ್ದೆಗಳನ್ನು ಉಲ್ಲಂಘನೆ ಮಾಡಿದ ಕೃಷಿ ಪರಿಕರಗಳ ಮಾರಾಟಗಾರರ ಒಟ್ಟು 215 ಪರವಾನಗಿಗಳನ್ನು ಅಮಾನತ್ತು ಮಾಡಲಾಗಿದ್ದು, 22 ಪರವಾನಗಿಗಳನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಹಕಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ ರೈತರೊಂದಿಗೆ ಒಂದು ದಿನ ಎಂಬ ಕೃಷಿ ಇಲಾಖೆಯ ಕಾರ್ಯಕ್ರಮ ಉಪಯುಕ್ತವಾದದ್ದು, ಕೃಷಿ ಸಚಿವರು ರೈತರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ ಅವರು ಮಾತನಾಡಿ ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಹೆಚ್ಚು ಹತ್ತಿಯನ್ನು ಬೆಳೆಯಲಾಗುತ್ತದೆ. ಈ ಹಿಂದೆ ಕಳಪೆ ಹತ್ತಿ ಬಿತ್ತನೆ ಬೀಜದ ಸಮಸ್ಯೆ ಉಂಟಾಗುತ್ತಿತ್ತು. ಜಾಗೃತ ಕೋಶ ಸ್ಥಾಪನೆಯಾದ ನಂತರ ಈ ಸಮಸ್ಯೆ ಬಗೆಹರಿದಿದೆ. ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿ ಉತ್ತಮ ಆದಾಯವನ್ನು ಗಳಿಸಬಹುದು. ಕೃಷಿ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇದ್ದು ಇವುಗಳನ್ನು ಭರ್ತಿ ಮಾಡಬೇಕು ಎಂದು ಕೃಷಿ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಲ್.ಆರ್.ಮಹದೇವಸ್ವಾಮಿ, ಕಾವೇರಿ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಎನ್.ಶಿವಲಿಂಗಯ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಎ.ಹೆಮಂತ್ ಕುಮಾರ್ ಗೌಡ, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾದ ಕೃಷ್ಣಪ್ಪಗೌಡ ಎನ್.ಆರ್, ಅರಣ್ಯ ಮತ್ತು ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ಅಪ್ಪಣ್ಣ, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶಿವಯೋಗಿ ಸಿ. ಕಳಸದ, ಕೃಷಿ ಇಲಾಖೆಯ ಆಯುಕ್ತರಾದ ಬಿ. ಶರತ್, ಜಾಗೃತ ಕೋಶದ ಅಪರ ಕೃಷಿ ನಿರ್ದೇಶಕರಾದ ಡಾ. ಅನೂಪ್ ಕೆ.ಜಿ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.