ಮನೆ ರಾಜ್ಯ ರಾಜ್ಯದ ವಿವಿಧೆಡೆ ಮುಂದುವರಿದ ಮಳೆ: ಕರಾವಳಿಯಲ್ಲಿ ʻಆರೆಂಜ್‌ ಅಲರ್ಟ್‌ʼ ಘೋಷಣೆ

ರಾಜ್ಯದ ವಿವಿಧೆಡೆ ಮುಂದುವರಿದ ಮಳೆ: ಕರಾವಳಿಯಲ್ಲಿ ʻಆರೆಂಜ್‌ ಅಲರ್ಟ್‌ʼ ಘೋಷಣೆ

0

ಬೆಂಗಳೂರು (Bengaluru): ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗುತ್ತಿದೆ. ರಾಜ್ಯದ ಕೊಡಗು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಎಡೆಬಿಡದೆ ಮಳೆ ಸುರಿದಿದೆ.

ಜುಲೈ 7ರವರೆಗೆ ರಾಜ್ಯದ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಆರೆಂಜ್ ಅಲರ್ಟ್’ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಡಗು ಜಿಲ್ಲೆಯಲ್ಲಿ ಬುಧವಾರವೂ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ ಹಾಗೂ ಎನ್‌.ಆರ್‌.ಪುರ ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜುಲೈ 9ರವರೆಗೆ ರಜೆ ಘೋಷಿಸಲಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಹಾಗೂ ಮಂಗಳವಾರ ದಿನವಿಡೀ ಭಾರಿ ಗಾಳಿಯೊಂದಿಗೆ ಮಳೆಯಾಗಿದೆ. ತಲಕಾವೇರಿ– ಭಾಗಮಂಡಲ ರಸ್ತೆಯಲ್ಲಿ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದಿದೆ. ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಮೊಣ್ಣಂಗೇರಿ ಸಮೀಪ ಕುಸಿದ ಮಣ್ಣನ್ನು ತೆರವುಗೊಳಿಸಲಾಗಿದೆ. ಹಾರಂಗಿ ಜಲಾಶಯದಿಂದ 12,866 ಕ್ಯುಸೆಕ್‌ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲೂ ಮಳೆಯಾಗಿದೆ. ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು, 44 ಸಾವಿರ ಕ್ಯುಸೆಕ್‌ ನಷ್ಟು ನೀರನ್ನು ನದಿಗೆ ಬಿಡಲಾಗಿದೆ. ಮಲೆನಾಡು, ಹಾಸನ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.

ಧಾರವಾಡ, ಬೆಳಗಾವಿ, ವಿಜಯನಗರ, ಬಾಗಲಕೋಟೆ, ಗದಗ, ಹಾವೇರಿ, ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಕೆಲವೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.