ತುಮಕೂರು, ಮೇ 02: ತುಮಕೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ (H5N1) ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪರಿಸ್ಥಿತಿ ಗಂಭೀರವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ನವಿಲುಗಳ ಸರಣಿ ಸಾವುಗಳು ವರದಿಯಾಗಿದ್ದ ಹಿನ್ನೆಲೆ ಇದೀಗ ಅದೇ ವ್ಯಾಪ್ತಿಯಲ್ಲಿ ಕೋಳಿಗಳ ಸಾವೂ ಸಂಭವಿಸಿರುವುದು ಅಧಿಕಾರಿಗಳ ಆತಂಕವನ್ನು ಹೆಚ್ಚಿಸಿದೆ. ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿ ಏಕಾಏಕಿ ಸುಮಾರು 30 ಕೋಳಿಗಳು ಸಾವನ್ನಪ್ಪಿರುವುದು ಹಕ್ಕಿಜ್ವರದ ಅನುಮಾನಕ್ಕೆ ಕಾರಣವಾಗಿದೆ.
ಈ ಕೋಳಿಗಳ ಸಾವಿನ ನಿಖರ ಕಾರಣ ಪತ್ತೆಹಚ್ಚಲು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ. ಈಗಾಗಲೇ ನವಿಲುಗಳ ಸಾವಿಗೆ ಹಕ್ಕಿಜ್ವರವೇ ಕಾರಣ ಎಂದು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಕೋಳಿಗಳ ಸಾವಿಗೂ ಅದೇ ಸೋಂಕು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬೆಳವಣಿಗೆ ಜಿಲ್ಲೆಯಲ್ಲಿ ಮತ್ತಷ್ಟು ಎಚ್ಚರಿಕೆಗೆ ಕಾರಣವಾಗಿದೆ.
ಕಳೆದ ಏಪ್ರಿಲ್ 16ರಿಂದ ತುಮಕೂರು ತಾಲೂಕಿನ ವಿವಿಧ ಭಾಗಗಳಲ್ಲಿ ನವಿಲುಗಳ ಸಾವು ಪ್ರಾರಂಭವಾಗಿತ್ತು. ಕೇವಲ 11 ದಿನಗಳ ಅವಧಿಯಲ್ಲಿ 44 ನವಿಲುಗಳು ಮೃತಪಟ್ಟಿರುವುದು ದಾಖಲೆಯಾಗಿದೆ. ಆರಂಭದಲ್ಲಿ ತಾಪಮಾನ ಏರಿಕೆಯಿಂದಾಗಿ ಉಷ್ಣಾಘಾತ ಅಥವಾ ನೀರಿನ ಕೊರತೆಯಿಂದ ಈ ಸಾವುಗಳು ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದರು. ಆದರೆ ನಂತರ ಪ್ರಯೋಗಾಲಯದಿಂದ ಬಂದ ವರದಿಗಳು ಈ ಸಾವುಗಳಿಗೆ ಹಕ್ಕಿಜ್ವರವೇ ಕಾರಣ ಎಂಬುದನ್ನು ಖಚಿತಪಡಿಸಿವೆ.
ನವಿಲುಗಳ ಸಾವಿನ ಬಳಿಕ ಇದೀಗ ಕೋಳಿಗಳ ಸಾವು ಸಂಭವಿಸಿರುವುದು ಸೋಂಕು ವ್ಯಾಪಿಸುವ ಭೀತಿ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಪಶು ಸಂಗೋಪನಾ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಕಟ್ಟುನಿಟ್ಟಿನ ನಿಗಾವಹಣೆ ಆರಂಭಿಸಿದ್ದಾರೆ. ಸೋಂಕು ಮತ್ತಷ್ಟು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಕಲ್ಲಳ್ಳಿ, ಕೋಡಿಹಳ್ಳಿ, ಹುಣ್ಣೆನಹಳ್ಳಿ, ಬೊಮ್ಮನಹಳ್ಳಿ ಮತ್ತು ಬೈರಸಂದ್ರ ಪ್ರದೇಶಗಳ ನಿವಾಸಿಗಳು ಹೆಚ್ಚಿನ ಜಾಗ್ರತೆ ವಹಿಸುವಂತೆ ಸೂಚಿಸಿದ್ದಾರೆ. ಯಾವುದೇ ಕೋಳಿ ಅಥವಾ ಹಕ್ಕಿಗಳ ಸಾವು ಕಂಡುಬಂದಲ್ಲಿ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಅನಗತ್ಯ ಆತಂಕ ಬೇಡವಾದರೂ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಸೋಂಕು ನಿಯಂತ್ರಣದ ಭಾಗವಾಗಿ ಈ ಐದು ಗ್ರಾಮಗಳನ್ನು ಕಂಟೋನ್ಮೆಂಟ್ ಜೋನ್ ಆಗಿ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಕೋಳಿ ಮಾರಾಟ ಮತ್ತು ಚಿಕನ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಲಾಗಿದೆ. ಜನಸಾಮಾನ್ಯರ ಸುರಕ್ಷತೆಗಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದಲ್ಲದೆ, ಹಕ್ಕಿಜ್ವರ ಸಂಬಂಧಿತ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆಯನ್ನು ತೆರೆಯಲಾಗಿದ್ದು, ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಘಟನೆಗಳನ್ನು ತಕ್ಷಣ ವರದಿ ಮಾಡಲು ಸೂಚಿಸಲಾಗಿದೆ. ಮತ್ತೊಂದೆಡೆ, ರಾಜ್ಯ ಮಟ್ಟದ ತಜ್ಞರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದೆ. ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.















