ಖನ್ನಾ/ಲುಧಿಯಾನ ಪಂಜಾಬ್ನ ಲುಧಿಯಾನ ಜಿಲ್ಲೆಯ ಖನ್ನಾ ನಗರದ ರಾಜೇವಾಲ್ ಗ್ರಾಮದ 17 ವರ್ಷದ ಬಾಲಕ ಅಮರಿಂದರ್ ಸಿಂಗ್ ಈಗ ಸುದ್ದಿಯಾಗಿದ್ದಾನೆ. ಭಗತ್ ಪುರಾನ್ ಸಿಂಗ್ ಅವರ ಪೂರ್ವಜರ ಹಳ್ಳಿಯಿಂದ ಬಂದ ಸರಳ ಕುಟುಂಬದ ಈ ಹುಡುಗ, ತನ್ನ ಉತ್ಸಾಹ ಮತ್ತು ದೃಢಸಂಕಲ್ಪದಿಂದ ಯಾರೂ ಊಹಿಸಲೂ ಸಾಧ್ಯವಾಗದ ಸಾಧನೆ ಮಾಡಿದ್ದಾನೆ ಎನ್ನಲಾಗಿದೆ. ಅಮರಿಂದರ್ ಸಿಂಗ್ ಐಪಿಎಲ್ ಪಂದ್ಯ ವೀಕ್ಷಿಸಲು ಖನ್ನಾದಿಂದ ಮೊಹಾಲಿಗೆ ಸುಮಾರು 80 ಕಿಲೋಮೀಟರ್ ಓಡಿದ್ದಾನೆ. ಅಲ್ಲಿ ಆತ ಬಾಲಿವುಡ್ ನಟಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಅವರನ್ನು ಭೇಟಿಯಾಗಿದ್ದಾನೆ ಎನ್ನಲಾಗಿದೆ.
ಅಮರಿಂದರ್ ಸಿಂಗ್ ಅವರು ಈ ಕುರಿತು ಮಾತನಾಡಿದ್ದು, ‘ನನಗೆ ಬಾಲ್ಯದಿಂದಲೂ ಓಡುವ ಬಗ್ಗೆ ಒಲವು ಇದೆ. ಜನರ ಹೊಗಳಿಕೆ ನನಗೆ ಹೊಸ ಚೈತನ್ಯ ತುಂಬಿತು. ನಾನು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ದೂರ ಓಡುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತೇನೆ. ಇದನ್ನು ತುಂಬಾ ಜನರು ಇಷ್ಟ ಪಡುತ್ತಿದ್ದರು. ಪ್ರೀತಿ ಜಿಂಟಾ ಅವರನ್ನು ಭೇಟಿಯಾಗಬೇಕೆಂಬ ಕನಸು ನನ್ನ ಹೃದಯದಲ್ಲಿತ್ತು. ಈ ಕನಸನ್ನು ನನಸಾಗಿಸಲು ನಾನು ಯಾವುದೇ ಭಯವಿಲ್ಲದೆ 80 ಕಿಲೋ ಮೀಟರ್ ದೂರ ಓಡಲು ನಿರ್ಧರಿಸಿದೆ’ ಎಂದು ಹೇಳಿಕೊಂಡಿದ್ದಾನೆ. ಟಿಕೆಟ್ ಇಲ್ಲದೆ ಬೆಳಗಿನ ಜಾವ ಕ್ರೀಡಾಂಗಣದತ್ತ ಓಡುವುದು ಅಮರಿಂದರ್ ಸಿಂಗ್ಗೆ ಸುಲಭವಾಗಿರಲಿಲ್ಲ
ಆಗ ಆಯಾಸ, ಬಿಸಿಲು ಮತ್ತು ದೈಹಿಕ ಬಳಲಿಕೆ ದಾರಿಯುದ್ದಕ್ಕೂ ಎದುರಾಯಿತು. ಆದರೆ, ಇದ್ಯಾವುದರಿಂದಲೂ ಅಮರಿಂದರ್ ಧೈರ್ಯ ಕಳೆದುಕೊಳ್ಳಲಿಲ್ಲ. ಪ್ರತಿ 15 ಕಿಮೀ ಓಡಿದ ನಂತರ ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಪಡೆದುಕೊಂಡ. ನಂತರ ತಾನು ತಲುಪಬೇಕಾದ ಸ್ಥಳದತ್ತ ಮುಂದುವರೆದ. ಹಲವು ಗಂಟೆಗಳ ಕಠಿಣ ಪರಿಶ್ರಮದ ನಂತರ, ಆತ ಮೊಹಾಲಿಯನ್ನು ತಲುಪಿದಾಗ, ಆತನ ಬಳಿ ಪಂದ್ಯದ ಟಿಕೆಟ್ ಕೂಡ ಇರಲಿಲ್ಲ. ಆದರೆ, ಉದ್ದೇಶಗಳು ಬಲವಾಗಿರುವಲ್ಲಿ ಮಾರ್ಗವು ಸ್ವತಃ ರೂಪುಗೊಳ್ಳುತ್ತದೆ ಎಂಬ ಮಾತು ಇಲ್ಲಿ ನಿಜವಾಗಿದೆ. ಕ್ರೀಡಾಂಗಣದ ಬಳಿಯಿದ್ದ ಪೊಲೀಸ್ ಅಧಿಕಾರಿಗಳು ಆತನನ್ನು ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೇ ನೋಡಿದ್ದರು. ಅವನ ಧೈರ್ಯದಿಂದ ಪ್ರಭಾವಿತರಾಗಿ, ಅವರು ಅವನಿಗೆ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವಕಾಶ ನೀಡಿದರು. ಹೀಗಾಗಿ, ಅಮರಿಂದರ್ ಕನಸು ನನಸಾಯಿತು ಎನ್ನಲಾಗಿದೆ.
ನಟಿ ‘ಪ್ರೀತಿ ಜಿಂಟಾ ಅವರನ್ನು ಭೇಟಿಯಾಗಲು ಬಿಡುತ್ತಾರೋ, ಇಲ್ಲವೋ ಎಂದು ನನ್ನ ಕುಟುಂಬ ಆಗಾಗ್ಗೆ ಹೇಳುತ್ತಿತ್ತು. ಆದರೆ, ನಾನು ಮನೆಯಿಂದ ಅವರನ್ನು ಭೇಟಿಯಾಗಲು ಹೊರಟಿದ್ದೆ, ನನಗೆ ದೇವರಲ್ಲಿ ನಂಬಿಕೆ ಇತ್ತು, ಅವರು ದಯಾಳು ಆಗಿದ್ದರಿಂದಾಗಿ ಪ್ರೀತಿ ಜಿಂಟಾರನ್ನು ಭೇಟಿಯಾಗುವ ನನ್ನ ಕನಸನ್ನು ನನಸಾಗಿಸಿದರು’ ಎಂದು ಅಮರಿಂದರ್ ಸಿಂಗ್ ಸಂತಸ ವ್ಯಕ್ತಪಡಿಸಿದ. ಕ್ರೀಡಾಂಗಣ ತಲುಪಿದಾಗ ನಾನು ಮೊದಲು ಭೇಟಿಯಾದದ್ದು ಪ್ರೀತಿ ಜಿಂಟಾ ಅವರನ್ನು ಎಂದ ಅಮರಿಂದರ್, ಅವರು ಕ್ರೀಡಾಂಗಣ ತಲುಪಿದಾಗ ನನ್ನನ್ನು ಭೇಟಿಯಾದರು. ನನ್ನ ಕಥೆಯನ್ನು ಕೇಳಿದ ನಂತರ, ಅವರು ನನ್ನನ್ನು ಹೊಗಳಿದರು ಮತ್ತು ಪಂಜಾಬ್ ಕಿಂಗ್ಸ್ ಟಿ-ಶರ್ಟ್ ಅನ್ನು ನನಗೆ ಉಡುಗೊರೆಯಾಗಿ ನೀಡಿದರು ಎನ್ನಲಾಗಿದೆ.















