ಮೈಸೂರು: ಮೈಸೂರಿನ ಹಲವೆಡೆ ರಸ್ತೆಗಳ ಅಗಲೀಕರಣ, ಮೇಲ್ಸೇತುವೆ ನಿರ್ಮಾಣಕ್ಕಾಗಿ 561 ಮರಗಳ ಕಟಾವು ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ. ಮೈಸೂರು ವಲಯ ವ್ಯಾಪ್ತಿಯ ಸ್ಥಳಗಳಲ್ಲಿ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ನಾನಾ ಜಾತಿಯ ಮರಗಳನ್ನು ತೆರವುಗೊಳಿಸಿಕೊಡುವಂತೆ ಮೈಸೂರು ಘಟಕದ ಎನ್‌ಎಚ್‌ಎಐ ಪ್ರಾಜೆಕ್ಟ್ ಮ್ಯಾನೇಜರ್, ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಅರಣ್ಯಾಧಿಕಾರಿಗಳ ಕಚೇರಿ ಮೈಸೂರು ವಲಯದಲ್ಲಿ ಸಾರ್ವಜನಿಕರಿಗಾಗಿ ಅಹವಾಲು ಪೆಟ್ಟಿಗೆಯನ್ನು ಇರಿಸಲಾಗಿದೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಪತ್ರದ ಮುಖಾಂತರ ಪೆಟ್ಟಿಗೆಯಲ್ಲಿ ಮೇ 7ರ ಸಂಜೆ 5.30ರ ವರೆಗೆ ಸಲ್ಲಿಸಬಹುದಾಗಿದೆ. ಇದರ ಈ-ಮೇಲ್: rfomysore123@gmail.com ಹಾಗೂ ವೃಕ್ಷಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳು, ಮೈಸೂರು ಪ್ರಾದೇಶಿಕ ವಲಯ, ಅರಣ್ಯ ಭವನ, ಅಶೋಕಪುರಂ -570008 ಅಂಚೆ ವಿಳಾಸಕ್ಕೆ ನಿಗದಿತ ಸಮಯ ಹಾಗೂ ದಿನಾಂಕದೊಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂಬ ಮಾಹಿತಿ ತಿಳಿಸಲಾಗಿದೆ ಎನ್ನಬಹುದು.
ಈ ಕುರಿತು ಮೈಸೂರು ನಗರದ ಸಿದ್ದಿಕಿ ನಗರ, ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಹತ್ತಿರ ಎನ್‌ಎಚ್-275ರ ಬೆಂಗಳೂರಿನಿಂದ-ಮೈಸೂರು ವಿಭಾಗದ ಕಿ.ಮೀ.18 ರಿಂದ ಕಿ.ಮೀ.135.304 ವರೆಗಿನ ನಾಲ್ಕು ಪಥಗಳ ಫ್ಲೈಓವರ್ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಮರಗಳ ವಿವರ: ಸಿದ್ದಿಕಿ ನಗರ -ಮೈಸೂರು ಫೌಂಟೇನ್ ಸರ್ಕಲ್ ರಸ್ತೆ- 19, ಬನ್ನಿಮಂಟಪ ರಸ್ತೆ ಪಾರ್ಕ್ ಆವರಣದಲ್ಲಿನ ಗಿಡ- ಮರಗಳು- 256, ಹುಣಸೂರು ರಸ್ತೆ ಮಧ್ಯಭಾಗದ ಗಿಡ- ಮರಗಳು- 52, ನಂಜನಗೂಡು ರಸ್ತೆಯ ಮಧ್ಯ ಭಾಗದ ಮರಗಳು-20, ಅಲ್ಲದೇ 3 ಶ್ರೀಗಂಧ ಮರಗಳು ಸೇರಿವೆ. ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಅಡಚಣೆಯಾಗಿರುವ ಟಿವಿಎಸ್ ಸರ್ಕಲ್ ಕಡಕೋಳ ಮತ್ತು ಮಂಡಕಳ್ಳಿ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಮರಗಳ ವಿವರ: ಟಿ.ವಿ.ಎಸ್ ಸರ್ಕಲ್ ಕಡಕೊಳ- 11, ಮಂಡಕಳ್ಳಿ- 4
ಹಾಗೂ ಕೇರಳದ ಗಡಿಯಿಂದ ಕೊಳ್ಳೇಗಾಲದ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಮರಗಳ ವಿವರ: ವರುಣ ಸರ್ಕಲ್‌ನಲ್ಲಿ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಮರಗಳು- 26, ದುದ್ದಗೆರೆ- ಪುಟ್ಟೇಗೌಡನಹುಂಡಿ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಮರಗಳು- 110, ಎಂ.ಸಿ.ಹುಂಡಿ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ 60 ಮರಗಳನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ವೃಕ್ಷಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಸೂರಿನ ನಾನಾ ಕಡೆ 561 ಮರಗಳನ್ನು ಕಡಿಯುವ ಸಂಬಂಧ, ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡುವಂತೆ ಪರಿಸರಕ್ಕಾಗಿ ನಾವು ಸಂಘಟನೆ ಮುಖಂಡರು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಆದರಿಂದ ನಗರದ ಅಶೋಕಪುರಂನಲ್ಲಿರುವ ಅರಣ್ಯಭವನದಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಅವರಿಗೆ, ಮುಖಂಡರು ಮನವಿ ಸಲ್ಲಿಸಿದ್ದಾರೆ. ಏ.27ರಂದು ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯು, ಇದುವರೆಗೆ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ಸಂಘಟನೆಯ ಗಮನಕ್ಕೆ ಬಂದಿಲ್ಲ. ಪತ್ರಿಕೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ಕೊಡದಿದ್ದರೆ, 561 ಮರಗಳನ್ನು ಕಡಿಯಲು ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವುದಾದರೂ ಹೇಗೆ? ಗಂಭೀರವಾದ ಲೋಪವಾಗಿದೆ. 10 ದಿನಗಳು ಕಾಲಾವಕಾಶ ನೀಡುವಂತೆ ಹಾಗೂ ಸಾರ್ವಜನಿಕ ಅಹವಾಲು ಸಭೆ ಕರೆಯಲು ಪ್ರಕಟಣೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದರು ಎನ್ನಲಾಗಿದೆ. ಸಂಘದ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ಕಾರ್ಯಾಧ್ಯಕ್ಷ ಆಂಜನೇಯ ರೆಡ್ಡಿ ನೀರಾವರಿ, ಉಪಾಧ್ಯಕ್ಷ ಕವಿತ ಎ.ಎಸ್.ಎಲೇದಹಳ್ಳಿ, ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪಾರ್ವತಿ ಶ್ರೀರಾಮ್, ಸಂಚಾಲಕಿ ಲೀಲಾ ವೆಂಕಟೇಶ್, ಭಾಗ್ಯ ಶಂಕರ್, ಅಂಜನಾ, ಪ್ರಭಾ ನಂದೀಶ್, ಎಸ್. ಗಾಯತ್ರಿ, ಎಸ್. ಮಧುಶ್ರೀ, ಕುಸುಮಾ ಆಯರಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಮಾಹಿತಿ ನಿಡಲಾಗಿದೆ.















