ಮನೆ ಸುದ್ದಿ ಜಾಲ 18 ರೌಡಿ ಶೀಟರ್​ಗಳ ಗಡಿಪಾರು ಎಲ್ಲರೂ ‘ಗುಡ್ ಬಾಯ್ಸ್’ ಆಗಿರಬೇಕು – ಬೆಳಗಾವಿ ಜಿಲ್ಲೆಯ ಎಸ್ಪಿ...

18 ರೌಡಿ ಶೀಟರ್​ಗಳ ಗಡಿಪಾರು ಎಲ್ಲರೂ ‘ಗುಡ್ ಬಾಯ್ಸ್’ ಆಗಿರಬೇಕು – ಬೆಳಗಾವಿ ಜಿಲ್ಲೆಯ ಎಸ್ಪಿ ಖಡಕ್ ಎಚ್ಚರಿಕೆ

0

ಬೆಳಗಾವಿಕೊಲೆ, ಕೊಲೆ ಯತ್ನ, ಮಟಕಾ ಸೇರಿ ಮತ್ತಿತರ ಪ್ರಕರಣಗಳಲ್ಲಿ ಗುರುತಿಸಿಕೊಂಡಿರುವ 18 ರೌಡಿ ಶೀಟರ್​ಗಳನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಈ ಆರೋಪಿಗಳು ಟಗರು ಬಾಯ್ಸ್, ಹುಲಿ ಬಾಯ್ಸ್, ಬ್ಯಾಡ್ ಬಾಯ್ಸ್ ಅಂತೆಲ್ಲಾ ಹವಾ ಕ್ರಿಯೇಟ್ ಮಾಡುತ್ತಿದ್ದರು. ಇಂತವರಿಗೆಲ್ಲಾ ಜಿಲ್ಲೆಯಲ್ಲಿ ಅವಕಾಶ ಇಲ್ಲ. ಇಲ್ಲೇನಿದ್ದರೂ ವೆರಿ ಗುಡ್ ಬಾಯ್ಸ್ ಗೆ ಮಾತ್ರ ಅವಕಾಶ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಖಡಕ್ ಎಚ್ಚರಿಕೆ ನೀಡಿದ್ದು ತಮ್ಮ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇವರೆಲ್ಲಾ ಅಪರಾಧಿಕ ಹಿನ್ನೆಲೆ ಹೊಂದಿದ್ದು, ರೌಡಿಸಂ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಕಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿದ್ದರು. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿತ್ತು.‌ ಇದನ್ನು ತಡೆಗಟ್ಟುವ ಉದ್ದೇಶದಿಂದ ಕಳೆದ ಒಂದೂವರೇ ತಿಂಗಳಲ್ಲಿ 18 ಆರೋಪಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ ಎನ್ನಲಾಗಿದೆ.

ಈ ಕುರಿತು ಗೋಕಾಕ್​ ಶಹರ್​ ಠಾಣೆ ವ್ಯಾಪ್ತಿಯ ಆರೋಪಿ ಗಂಗಪ್ಪ ನಾಯಕ, ಸಂಜು ಮೇಸ್ತ್ರಿ 6 ತಿಂಗಳು ಗಡಿಪಾರು, ಗೋಕಾಕ್​ ಗ್ರಾಮೀಣ ಠಾಣೆ ವ್ಯಾಪ್ತಿಯ ಸಾಗರ ಖಾನಾಪುರ, ಪಾಸ್ಕಲ್ ಮುತ್ತುಸ್ವಾಮಿ 6 ತಿಂಗಳು, ಕುಲಗೋಡ ಠಾಣೆ ವ್ಯಾಪ್ತಿಯ ದಸ್ತಗೀರ್ ಸಾಬ್ ನವಲಗಿ 8 ತಿಂಗಳು, ಮುರಗೋಡ ಠಾಣೆಯ ಹಣಮಂತ ಮಾದರ 1 ವರ್ಷ, ನೀಲಕಂಠ ಮಣವಾಡಕರ 6 ತಿಂಗಳು, ನಿಪ್ಪಾಣಿ ಶಹರ್​ ಠಾಣೆಯ ಸೈಫ್ ಅಲಿ ನಾಗರ್ಜಿ 1 ವರ್ಷ, ಸಂಕೇಶ್ವರ ಠಾಣೆಯ ಸಚಿನ್​ ಚೌಡಕನ್ನವರ 1 ವರ್ಷ, ನಿಪ್ಪಾಣಿ ಶಹರ ಠಾಣೆಯ ಪ್ರವೀಣ ಚೌಗಲೆ 1 ವರ್ಷ, ನಿಪ್ಪಾಣಿ ಗ್ರಾಮೀಣ ಠಾಣೆಯ ಚಂದ್ರಕಾಂತ ವಡ್ಡರ 1 ವರ್ಷ, ಯಮಕನಮರಡಿ ಠಾಣಾ ವ್ಯಾಪ್ತಿಯ ಲಾಡಜಿಸಾಬ್ ಮುಲ್ತಾನಿ, ಪಾರೇಶ ನಾಶಿಪುಡಿ 8 ತಿಂಗಳು, ಕಟಕೋಳ ಠಾಣೆಯ ಚೇತನ್​ ನಾಯ್ಕರ 3 ತಿಂಗಳು, ಸವದತ್ತಿ ಠಾಣಾ ವ್ಯಾಪ್ತಿಯ ಹುಸೇನಸಾಬ್ ಬೀಳಗಿ 2 ತಿಂಗಳು, ಸುರೇಬಾನ ಪೊಲೀಸ್ ಠಾಣೆಯ ಚುರಚಪ್ಪ ಘಟ್ನೂರ 1 ತಿಂಗಳು, ಕಿತ್ತೂರ ಪೊಲೀಸ್ ಠಾಣೆಯ ದೀಪಕ ಕೆಳಗಡೆ 6 ತಿಂಗಳು, ಕುಮಾರ ಬೆಂಡಿಗೇರಿಯನ್ನು 7 ತಿಂಗಳು ಗಡಿಪಾರು ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ “ಬ್ಯಾಡ್ ಬಾಯ್ಸ್”, “ಟಗರು ಬಾಯ್ಸ್”, “ಕಿಂಗ್ ಮೇಕರ್” ಎಂಬ ಹೆಸರಿನಲ್ಲಿ ರೌಡಿ ಶೀಟರ್‌ಗಳು ರೀಲ್ಸ್ ಹಾಗೂ ವಿಡಿಯೋಗಳನ್ನು ಹರಿಬಿಡುತ್ತಿರುವ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಂಥ ಚಟುವಟಿಕೆಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಲು, ಯುವಕರ ಮೇಲೆ ಪ್ರಭಾವ ಬೀರಲು, ಊರಲ್ಲಿ ಹವಾ ಕ್ರಿಯೇಟ್ ಮಾಡುವ ಉದ್ದೇಶದಿಂದ ಕೆಲ ರೌಡಿ ಶೀಟರ್‌ಗಳು ಸಾಮಾಜಿಕ ಜಾಲತಾಣಗಳನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಆದರಿಂದ ಅಪ್ರಾಪ್ತ ಮಕ್ಕಳನ್ನು ಮುಂದೆ ನಿಲ್ಲಿಸಿ ಗ್ಯಾಂಗ್ ಶೈಲಿಯ ವಿಡಿಯೋ, ರೀಲ್ಸ್ ಮತ್ತು ಫೋಟೋಗಳನ್ನು ಹರಿಬಿಡುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಚಾಕು, ತಲವಾರ ಇಟ್ಟುಕೊಂಡು ಓಡಾಡುವುದೇ ಒಂದು ಹವ್ಯಾಸ ಆಗಿ ಬಿಟ್ಟಿದೆ ಎಂದು ಕೆ.ರಾಮರಾಜನ್ ವಿವರಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಬದುಕಬೇಕಾದರೆ ಎಲ್ಲರೂ ‘ಗುಡ್ ಬಾಯ್ಸ್’ ಆಗಿರಬೇಕು. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಲು ಮಕ್ಕಳನ್ನು ಬಳಸಿಕೊಂಡು ರೌಡಿಸಂ ಪ್ರದರ್ಶಿಸುತ್ತಿರುವುದನ್ನು ಸಹಿಸಲ್ಲ. ಆದೇಶ ಪಾಲಿಸದಿದ್ದರೆ ಸಂಬಂಧಪಟ್ಟ ರೌಡಿ ಶೀಟರ್‌ಗಳ ವಿರುದ್ಧ ಗಡಿಪಾರು ಕ್ರಮ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಾದ್ಯಂತ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದೆ. ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೋಷಕರು ತಮ್ಮ ಮಕ್ಕಳನ್ನು ಇಂಥ ಚಟುವಟಿಕೆಗಳಿಂದ ದೂರವಿಡಬೇಕು. ಚಾಕು ಹಿಡಿದು, ತಲವಾರನಿಂದ ಕೇಕ್ ಕಟ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದರೆ ಈಗಲೇ ತೆಗೆದುಬಿಡಿ, ಇಲ್ಲದಿದ್ದರೆ ಕಠಿಣ ಕಾನೂನು ಕ್ರಮ ನಿಶ್ಚಿತ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಖಡಕ್​ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.