ಮನೆ ಸುದ್ದಿ ಜಾಲ ₹2.5 ಕೋಟಿಯ ಒಂದೂವರೆ ಕೆಜಿ ಚಿನ್ನದ ಆಭರಣ ಅಂಜನಾದ್ರಿ ದೇಗುಲಕ್ಕೆ ನೀಡಿದ ಉದ್ಯಮಿ

₹2.5 ಕೋಟಿಯ ಒಂದೂವರೆ ಕೆಜಿ ಚಿನ್ನದ ಆಭರಣ ಅಂಜನಾದ್ರಿ ದೇಗುಲಕ್ಕೆ ನೀಡಿದ ಉದ್ಯಮಿ

0

ಗಂಗಾವತಿ: ತಾಲೂಕಿನ ಚಿಕ್ಕರಾಂಪೂರಲ್ಲಿರುವ ಇತಿಹಾಸ ಪ್ರಸಿದ್ಧ ಅಂಜನಾದ್ರಿ ದೇಗುಲಕ್ಕೆ ಹೈದರಾಬಾದ್‌ ಉದ್ಯಮಿಯೊಬ್ಬರು ಎರಡೂವರೆ ಕೋಟಿ ರೂ. ಮೌಲ್ಯದ ಒಂದೂವರೆ ಕೆ.ಜಿ ಬಂಗಾರದ ವಿವಿಧ ಆಭರಣಗಳನ್ನು ಶುಕ್ರವಾರ ದೇಣಿಗೆಯಾಗಿ ನೀಡಿದರು ಎನ್ನಲಾಗಿದೆ.

ಹೆಸರಾಂತ ನಿರ್ಮಾಣ ಸಂಸ್ಥೆ AMR Construction ಮಾಲೀಕರಾದ ಮಹೇಶ ರೆಡ್ಡಿ ಅವರು ತಮ್ಮ ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಬೆಳಗ್ಗೆ 5 ಗಂಟೆಗೆ ದೇಗುಲಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿ ಬಳಿಕ ಆಭರಣಗಳನ್ನು ಅರ್ಪಿಸಿದರು. ಉದ್ಯಮಿ ಮಹೇಶ್ ರೆಡ್ಡಿ ಅವರು ಗಂಗಾವತಿಯ ಶಾಸಕ ಜಿ.ಜನಾರ್ದನ ರೆಡ್ಡಿ ಅವರ ಆಪ್ತರಲ್ಲಿ ಒಬ್ಬರು ಎನ್ನಲಾಗಿದೆ. ಬಂಗಾರದ ಆಭರಣಗಳನ್ನು ದೇವಸ್ಥಾನಕ್ಕೆ ನೀಡುವ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮಿ ಅರುಣಾ ಹಾಜರಿದ್ದು, ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಆಂಜನೇಯನ ವಿಗ್ರಹದ ಹಿಂದೆ ಅಲಂಕರಿಸುವ ಬಂಗಾರದ ಪ್ರಭಾವಳಿ, ಚಕ್ರ, ಗದೆ, ಛತ್ರಿ, ಕಿರೀಟ, ಚಾಮರ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೇಣಿಗೆ ರೂಪದಲ್ಲಿ ಉದ್ಯಮಿ ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದರು ಎಂದು ತಿಳಿದು ಬಂದಿದೆ.

ನಂತರ  ಆಭರಣಗಳನ್ನು ಆಂಜನೇಯನಿಗೆ ಅಲಂಕರಿಸಿವಿಶೇಷ ಪೂಜೆ ಸಲ್ಲಿಸಲಾಯಿತು. ಇದಕ್ಕೂ ಮೊದಲು ಬೆಳಗ್ಗೆ 5 ಗಂಟೆಗೆ ವಾದ್ಯಮೇಳಗಳೊಂದಿಗೆ ಉದ್ಯಮಿ ಹಾಗೂ ಅವರ ಕುಟುಂಬಸ್ಥರನ್ನು ದೇವಸ್ಥಾನದಲ್ಲಿ ಸ್ವಾಗತಿಸಲಾಯಿತು. ಪಾದಗಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಉದ್ಯಮಿಯ ಕುಟುಂಬ, ದೇಣಿಗೆ ನೀಡಲು ತಂದಿದ್ದ ಆಭರಣಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಿ ಪಾದಯಾತ್ರೆ ಮೂಲಕ ಬೆಟ್ಟದ ಮೇಲೆ ತೆರಳಿದರು. ಬಳಿಕ ವಿವಿಧ ಪೂಜೆ ಹೋಮ-ಹವನಾದಿಗಳು ನಡೆದವು. ಈ ಕುರಿತು ಜನಾರ್ದನ ರೆಡ್ಡಿ ಮಾತನಾಡಿ, “ಆಂಜನೇಯನಿಗೆ ಸಂಕಲ್ಪ ಪೂಜೆ, ಸುಪ್ರಭಾತ ಸೇವೆ ಸಲ್ಲಿಸಿ ಆಭರಣ ಹಸ್ತಾಂತರ ಮಾಡಲಾಗಿದೆ. ಇದಕ್ಕೂ ಮೊದಲು ಉದ್ಯಮಿ ಮಹೇಶ ರೆಡ್ಡಿ ಅವರು ಶಿರಡಿಯ ಸಾಯಿ ಬಾಬಾ ದೇವಸ್ಥಾನಕ್ಕೆ 140 ಕೆ.ಜಿ ಬಂಗಾರ ದೇಣಿಗೆ ನೀಡಿದ್ದಾರೆ. ದೇಶದ ನಾನಾ ದೇಗುಲಗಳಿಗೆ ಆಗಾಗ ಕೊಡುಗೆ ನೀಡುತ್ತಲೇ ಬಂದಿದ್ದಾರೆ” ಎಂದು ತಿಳಿಸಿದರು ಎನ್ನಲಾಗುತ್ತಿದೆ.