ಮನೆ ಸುದ್ದಿ ಜಾಲ Mothers Day ಶುಭಾಶಯ ವಿಚಾರಕ್ಕೆ ಗೃಹ ಕಲಹ: ಪತ್ನಿ ಮೇಲೆ ಪತಿಯ ಹಲ್ಲೆ ಆರೋಪ

Mothers Day ಶುಭಾಶಯ ವಿಚಾರಕ್ಕೆ ಗೃಹ ಕಲಹ: ಪತ್ನಿ ಮೇಲೆ ಪತಿಯ ಹಲ್ಲೆ ಆರೋಪ

0

ಬೆಂಗಳೂರು: ವಿಶ್ವ ತಾಯಂದಿರ  ದಿನದಂದು ವಾಟ್ಸ್ಆಪ್ ಸ್ಟೇಟಸ್ ನಲ್ಲಿ ತಾಯಿಯ ಫೋಟೋ ಹಾಕಿದ ವಿಚಾರಕ್ಕೆ ಪತಿಯೊಬ್ಬ ಪತ್ನಿ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಯಮುನಾಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿ ಪ್ರದೀಪ್ ಕುಮಾರ್ ವಿರುದ್ಧ ಪತ್ನಿ ಯಮುನಾ ದೂರು ನೀಡಿದ್ದು, ಹಲವು ವರ್ಷಗಳಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೂಲತಃ ಬೆಂಗಳೂರು ಉತ್ತರ ತಾಲೂಕಿನ ಬೈಲಕೋನೇನಹಳ್ಳಿ ನಿವಾಸಿಯಾಗಿರುವ ಯಮುನಾ, 2022ರಲ್ಲಿ ಪ್ರದೀಪ್ ಕುಮಾರ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗಳು ಇದ್ದಾಳೆ.

ಮದುವೆಯಾದ ಬಳಿಕದಿಂದಲೇ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಯಮುನಾ ಆರೋಪಿಸಿದ್ದಾರೆ. ಮದ್ಯಪಾನ ಮಾಡಿ ಮನೆಗೆ ಬಂದು ಜಗಳ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಸಣ್ಣ ವಿಷಯಗಳಿಗೂ ಗಲಾಟೆ ಮಾಡುವುದು ಸಾಮಾನ್ಯವಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಮೇ 10ರಂದು ವಿಶ್ವ ತಾಯಂದಿರ ದಿನದ ಅಂಗವಾಗಿ ಯಮುನಾ ತಮ್ಮ ತಾಯಿಯ ಫೋಟೋವನ್ನು ವಾಟ್ಸ್ಆಪ್ ಸ್ಟೇಟಸ್ ನಲ್ಲಿ ಹಾಕಿ ತಾಯಂದಿರ ದಿನದ  ಶುಭಾಶಯ ಕೋರಿದ್ದರು. ಆದರೆ ತನ್ನ ತಾಯಿಯ ಫೋಟೋವನ್ನು ಸ್ಟೇಟಸ್ ನಲ್ಲಿ ಹಾಕದೇ ಇರೋದನ್ನು ಪ್ರಶ್ನಿಸಿ ಪತಿ ಪ್ರದೀಪ್ ಕುಮಾರ್ ಕೋಪಗೊಂಡಿದ್ದಾನೆ ಎನ್ನಲಾಗಿದೆ.

ಅದೇ ದಿನ ರಾತ್ರಿ ಸುಮಾರು 8 ಗಂಟೆ ವೇಳೆಗೆ ಮದ್ಯದ ಅಮಲಿನಲ್ಲಿ ಮನೆಗೆ ಬಂದ ಪತಿ, ಈ ವಿಚಾರವಾಗಿ ಪತ್ನಿಯೊಂದಿಗೆ ಜಗಳ ಆರಂಭಿಸಿದ್ದಾನೆ ಎಂದು ಹೇಳಲಾಗಿದೆ. ಬಳಿಕ ಮಾತಿನ ಚಕಮಕಿ ತೀವ್ರಗೊಂಡು ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ, ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದರಿಂದ ಯಮುನಾ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಯ ಬಳಿಕ ಯಮುನಾ ತಮ್ಮ ಪೋಷಕರಿಗೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೋಷಕರು ಕ್ಯಾಬ್ ಬುಕ್ ಮಾಡಿಕೊಂಡು ಮನೆಗೆ ಬರುವಂತೆ ಸೂಚಿಸಿದ್ದು, ಅವರು ಪೋಷಕರ ಮನೆಗೆ ತೆರಳಿದ್ದಾರೆ.

ಗಾಯಗೊಂಡ ಯಮುನಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಬಳಿಕ ಮೂರು ದಿನಗಳ ನಂತರ ಅವರು ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ. ಪತಿ ಪ್ರತಿದಿನ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ವರದಕ್ಷಿಣೆ ತರುವಂತೆ ಪತಿ ಒತ್ತಡ ಹೇರುತ್ತಿದ್ದಾನೆ ಎಂಬ ಆರೋಪವನ್ನೂ ಯಮುನಾ ಮಾಡಿದ್ದಾರೆ. ಈ ವಿಚಾರದಲ್ಲಿ ಅತ್ತೆಯೂ ಮಗನ ಪರವಾಗಿ ನಿಂತು ಬೆಂಬಲ ನೀಡುತ್ತಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕುಟುಂಬದಲ್ಲಿ ಉಂಟಾಗಿದ್ದ ಸಮಸ್ಯೆ ಬಗೆಹರಿಸಲು ಯಮುನಾ ಪೋಷಕರು ಹಲವು ಬಾರಿ ಮಧ್ಯಸ್ಥಿಕೆ ನಡೆಸಲು ಪ್ರಯತ್ನಿಸಿದ್ದರು. ಸುಮಾರು ಐದು ಬಾರಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. ಕುಟುಂಬ ಕಲಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಯಮುನಾಮಾದನಾಯಕನಹಳ್ಳಿ ಪೊಲೀಸರು ಪತಿ ಪ್ರದೀಪ್ ಕುಮಾರ್ ಹಾಗೂ ಅತ್ತೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ವಿಶ್ವ ತಾಯಂದಿರ ದಿನ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.