ಮನೆ ಸುದ್ದಿ ಜಾಲ ‘ಸಿಎಂ ವಿಜಯ್ ಸರ್.. ನನ್ನ ಪತ್ನಿಯನ್ನು ಉಳಿಸಿ’ ಎಂದು ಕಣ್ಣೀರಿಟ್ಟ ನಟ

‘ಸಿಎಂ ವಿಜಯ್ ಸರ್.. ನನ್ನ ಪತ್ನಿಯನ್ನು ಉಳಿಸಿ’ ಎಂದು ಕಣ್ಣೀರಿಟ್ಟ ನಟ

0

ತಮಿಳುನಾಡು : ತಮಿಳು ಚಿತ್ರರಂಗದ ಹಾಸ್ಯ ನಟ ಮುತ್ತುಕ್ಕಲೈ ಇದೀಗ ತಮ್ಮ ಕುಟುಂಬದ ಸಂಕಷ್ಟದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಪತ್ನಿಯ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಬಳಿ ಸಹಾಯ ಕೋರಿ ಅವರು ಭಾವುಕ ಮನವಿ ಮಾಡಿದ್ದಾರೆ. ಈ ಸಂಬಂಧ ಬಿಡುಗಡೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ವಿರುಧುನಗರ ಜಿಲ್ಲೆಯ ರಾಜಪಾಳಯಂ ಮೂಲದ ಮುತ್ತುಕ್ಕಲೈ ಬಾಲ್ಯದಿಂದಲೇ ಸಿನಿಮಾ ಕ್ಷೇತ್ರದ ಮೇಲೆ ಅಪಾರ ಆಸಕ್ತಿ ಹೊಂದಿದ್ದರು. ಈ ಆಸಕ್ತಿಯ ಕಾರಣದಿಂದ ಅವರು ಚಿಕ್ಕ ವಯಸ್ಸಿನಲ್ಲೇ ಚೆನ್ನೈಗೆ ತೆರಳಿ ಚಿತ್ರರಂಗದಲ್ಲಿ ಅವಕಾಶ ಹುಡುಕಲು ಆರಂಭಿಸಿದರು. ಕೇವಲ 18ನೇ ವಯಸ್ಸಿನಲ್ಲಿ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದ ಅವರು, ಮೊದಲಿಗೆ ಸಿನಿಮಾಗಳಲ್ಲಿ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡತೊಡಗಿದರು. ನಂತರ ನಿಧಾನವಾಗಿ ಹಾಸ್ಯ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಸಿನಿಮಾ ಜೀವನದ ನಡುವೆ ಮುತ್ತುಕ್ಕಲೈ ಅನೇಕ ವೈಯಕ್ತಿಕ ಸಮಸ್ಯೆಗಳನ್ನೂ ಎದುರಿಸಿದರು. ಕೆಲಕಾಲ ಮದ್ಯದ ವ್ಯಸನಕ್ಕೆ ಒಳಗಾಗಿ ಸಂಕಷ್ಟ ಅನುಭವಿಸಿದ ಅವರು, ಬಳಿಕ ಅದರಿಂದ ಹೊರಬಂದು ಬದುಕನ್ನು ಹೊಸ ದಿಕ್ಕಿನಲ್ಲಿ ಸಾಗಿಸಲು ನಿರ್ಧರಿಸಿದರು. ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದ್ದ ಅವರು, ಮತ್ತೆ ಓದಿನತ್ತ ಗಮನ ಹರಿಸಿ ಅನೇಕರಿಗೆ ಮಾದರಿಯಾದರು.

ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಮುತ್ತುಕ್ಕಲೈ 2017ರಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಪಡೆದರು. ನಂತರ 2019ರಲ್ಲಿ ತಮಿಳು ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ಇತ್ತೀಚೆಗೆ 58ನೇ ವಯಸ್ಸಿನಲ್ಲಿ ತಮಿಳು ಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಮತ್ತೊಂದು ಪದವಿ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಸಿನಿಮಾ ಕನಸಿನ ಕಾರಣದಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದಿದ್ದರೂ, ನಂತರ ಕಠಿಣ ಪರಿಶ್ರಮದ ಮೂಲಕ ಮೂರು ಪದವಿಗಳನ್ನು ಪಡೆದಿರುವುದು ಹಲವರಿಗೆ ಸ್ಪೂರ್ತಿಯಾಗಿದೆ.

ಆದರೆ ಇದೀಗ ಮುತ್ತುಕ್ಕಲೈ ಅವರ ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅವರ ಪತ್ನಿ ಮಾಲತಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಚೆನ್ನೈನ ಕಿಲ್ಪಾಕ್ ಪ್ರದೇಶದಲ್ಲಿರುವ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ತಲೆಯಲ್ಲಿ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆದಿದ್ದು ಈಗಾಗಲೇ 17 ದಿನಗಳು ಕಳೆದಿವೆ ಎಂದು ನಟ ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ಶ್ವಾಸಕೋಶದ ಸೋಂಕು ಸೇರಿದಂತೆ ಹಲವು ಸಣ್ಣಪುಟ್ಟ ಸೋಂಕುಗಳು ಕಾಣಿಸಿಕೊಂಡಿದ್ದು, ಇದರಿಂದ ಮಾಲತಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ ಎಂದು ಮುತ್ತುಕ್ಕಲೈ ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನೆರವು ಅಗತ್ಯವಿದ್ದು, ಮುಖ್ಯಮಂತ್ರಿ ವಿಜಯ್ ಅವರು ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

“ನಾನು ಕಳೆದ 17 ದಿನಗಳಿಂದ ಒಬ್ಬನೇ ಹೋರಾಟ ಮಾಡುತ್ತಿದ್ದೇನೆ. ನನ್ನ ಪತ್ನಿಯ ಜೀವ ಉಳಿಸಲು ಮುಖ್ಯಮಂತ್ರಿ ವಿಜಯ್ ಸರ್ ನೆರವಾಗಬೇಕು. ಅವರು ಸಹಾಯ ಮಾಡಿದರೆ ಜೀವನಪೂರ್ತಿ ಕೃತಜ್ಞನಾಗಿರುತ್ತೇನೆ” ಎಂದು ಮುತ್ತುಕ್ಕಲೈ ಭಾವುಕರಾಗಿ ಹೇಳಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಲವರು ನಟನ ಪರಿಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಮುಖ್ಯಮಂತ್ರಿ ವಿಜಯ್ ಈ ಮನವಿಗೆ ಸ್ಪಂದಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಈ ವಿಷಯ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಗಮನಕ್ಕೆ ತಲುಪಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. .ಇದೀಗ ನಟ ಮುತ್ತುಕ್ಕಲೈ ಅವರ ಮನವಿಗೆ ಸಿಎಂ ವಿಜಯ್ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ .