ಮನೆ ಕಾನೂನು ಜೀ ನ್ಯೂಸ್ ಸುದ್ದಿ ನಿರೂಪಕ ರೋಹಿತ್‌ಗೆ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ

ಜೀ ನ್ಯೂಸ್ ಸುದ್ದಿ ನಿರೂಪಕ ರೋಹಿತ್‌ಗೆ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ

0

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚಾನೆಲ್ ಸುಳ್ಳು ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಹಲವು ಕಡೆ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿ ರಂಜನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ತೇಜಿ ಅವರನ್ನು ಹತ್ಯೆಗೈದವರನ್ನು ಕ್ಷಮಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಜೀ ಹಿಂದೂಸ್ತಾನ್ ಸುದ್ದಿ ನಿರೂಪಕ ರೋಹಿತ್ ರಂಜನ್ ವಿರುದ್ಧ ಯಾವುದೇ ಒತ್ತಾಯದ ಕ್ರಮ ಕೈಗೊಳ್ಳದಂತೆ ಶುಕ್ರವಾರ ಸುಪ್ರೀಂ ಕೋರ್ಟ್ ನಿರ್ದೇಶಿಸದೆ. ಸುಳ್ಳು ಸುದ್ದಿಯನ್ನು ಭಿತ್ತರಿಸಿದ ಸಂಬಂಧ ರೋಹಿತ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ ಅವರ ನೇತೃತ್ವದ ವಿಭಾಗೀಯ ಪೀಠವು “ಜುಲೈ ೧ರಂದು ಸುದ್ದಿ ವಾಚನ/ಪ್ರಸಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರನ್ನು ಬಲವಂತವಾಗಿ ವಶಕ್ಕೆ ಪಡೆಯದಂತೆ ಪ್ರತಿವಾದಿಗಳ ವಿರುದ್ಧ ಮಧ್ಯಂತರ ಆದೇಶ ಮಾಡಲಾಗಿದೆ” ಎಂದು ಆದೇಶ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚಾನೆಲ್ ಸುಳ್ಳು ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಹಲವು ಕಡೆ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿ ರಂಜನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಉದಯಪುರದಲ್ಲಿ ಕೊಲೆಯಾದ ಟೈಲರ್ ಕನ್ಹಯ್ಯ ಲಾಲ್ ತೇಜಿ ಅವರ ಹಂತಕರನ್ನು ಕ್ಷಮಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಸುದ್ದಿ ವಾಹಿನಿಯು ಆರೋಪಿಸಿತ್ತು. ವಯನಾಡ್‌ನಲ್ಲಿ ತಮ್ಮ ಕಚೇರಿಯನ್ನು ಧ್ವಂಸಗೊಳಿಸಿದ್ದವರನ್ನು ಕ್ಷಮಿಸಬೇಕು ಎಂದು ರಾಹುಲ್ ಹೇಳಿದ್ದರೇ ವಿನಾ ಉದಯಪುರ ಪ್ರಕರಣದ ಆರೋಪಿಗಳನ್ನಲ್ಲ. ಆನಂತರ ವಾಹಿನಿಯು ಕ್ಷಮೆ ಕೋರಿತ್ತು.
ಛತ್ತೀಸ್‌ಗಢ ಪೊಲೀಸರು ಜುಲೈ ೫ರಂದು ರಂಜನ್ ಅವರನ್ನು ಬಂಧಿಸಲು ಅವರ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು ಮಧ್ಯಪ್ರವೇಶಿಸಿ ರಂಜನ್ ಅವರನ್ನು ವಶಕ್ಕೆ ಪಡೆದಿದ್ದರು. ಜಾಮೀನು ಸಹಿತ ಪ್ರಕರಣ ದಾಖಲಿಸಿದ್ದ ಉತ್ತರ ಪ್ರದೇಶ ಪೊಲೀಸರು ಅವರನ್ನು ಆನಂತರ ಬಿಡುಗಡೆ ಮಾಡಿದ್ದರು.
ವಿವಿಧ ಕಡೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಂದೆಡೆ ಸೇರಿಸಿ, ಅವುಗಳನ್ನು ವಜಾ ಮಾಡಬೇಕು ಮತ್ತು ರಂಜನ್ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಎಎನ್‌ಐ ಸುದ್ದಿ ಸಂಸ್ಥೆಯಿಂದ ವಿಡಿಯೊ ಸ್ವೀಕರಿಸಲಾಗಿದ್ದು, ಅದನ್ನು ತರಬೇತಿ ಹಂತದ ಕಾರ್ಯಕ್ರಮ ಸಿಬ್ಬಂದಿ ಪ್ರಸಾರ ಮಾಡಿದ್ದಾರೆ. ಇದರಿಂದಾಗಿ ಕಾರ್ಯಕ್ರಮವು ಅವಾಸ್ತವಿಕ ಅಂಶಗಳನ್ನು ಒಳಗೊಂಡಿತ್ತು. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಕಾರ್ಯಕ್ರಮ ಹಿಂಪಡೆದು, ವಿಷಾದಿಸಲಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.