ಪುಣೆ (ಮಹಾರಾಷ್ಟ್ರ): ಪುಣೆಯ ಸಿಂಹಗಡ್ ರಸ್ತೆ ಪಕ್ಕದ ನಿಂಬಾಜಿನಗರದಲ್ಲಿರುವ ರಿದ್ಧಿ ಸಿದ್ಧಿ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಲಿಫ್ಟ್‌ನೊಳಗೆ ಸಿಲುಕಿ 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದ್ದು ಮೃತ ಮಗುವನ್ನು ಶಿವಾಂಶ್ ಶೈಲೇಶ್ ಧುತ್ (7 ವರ್ಷ) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಸುಮಾರು 10.30ರ ಸುಮಾರಿಗೆ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿಂಹಗಡ್ ರಸ್ತೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದು ರಾತ್ರಿ 10.30ರ ಸುಮಾರಿಗೆ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಆಟವಾಡುತ್ತಿದ್ದಾಗ, ಶಿವಾಂಶ್ ಲಿಫ್ಟ್ ಒಳಗೆ ಹೋಗಿದ್ದಾನೆ. ಅಷ್ಟೇ ಅಲ್ಲದೆ ಬಟನ್ಗಳನ್ನು ಒತ್ತಿದ್ದು, ಲಿಫ್ಟ್ ಕಾರ್ಯನಿರ್ವಹಿಸಲು ಆರಂಭಿಸಿದೆ. ಆದರೆ, ಎರಡನೇ ಮಹಡಿ ತಲುಪುವ ಮೊದಲು, ಲಿಫ್ಟ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು ಎನ್ನಲಾಗಿದೆ.
ಸಾಕಷ್ಟು ಸಮಯ ಕಳೆದ ನಂತರವೇ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಏನಾಗಿದೆ ಎಂಬುದು ಗೊತ್ತಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ನಂತರ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬಾಲಕನನ್ನು ಹೊರತೆಗೆದರು. ಆದರೆ, ಆಗಲೇ ತುಂಬಾ ತಡವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿನಯ್ ಪಾಟಂಕರ್ ಅವರು ಮಾಹಿತಿ ನೀಡಿ, ಘಟನೆಯ ಪ್ರಾಥಮಿಕ ತನಿಖೆಯಲ್ಲಿ ಲಿಫ್ಟ್‌ನಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ. ಲಿಫ್ಟ್‌ನ ನಿರ್ವಹಣೆಯನ್ನು ಹೌಸಿಂಗ್ ಸೊಸೈಟಿ ನಿರ್ವಹಿಸುತ್ತದೆ ಎಂಬ ಮಾಹಿತಿ ಹೊರಬಿದ್ದಿದ್ದು, ಈ ಕುರಿತು ಹೆಚ್ಚಿನ ತನಿಖೆಗಳು ಪ್ರಸ್ತುತ ನಡೆಯುತ್ತಿವೆ ಎಂದು ತಿಳಿಸಿದರು ಎನ್ನಲಾಗಿದೆ.

















