ಕಾಮಿಡಿ ಇಷ್ಟಪಡುವ ಪ್ರೇಕ್ಷಕರಿಗೆ ಗಿಲ್ಲಿ ನಟ ಎಂದರೆ ಸಖತ್ ಇಷ್ಟ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಸ್ಪರ್ಧಿಸಿ ವಿನ್ ಆದ ಬಳಿಕ ಗಿಲ್ಲಿ ನಟ ಅವರ ಖ್ಯಾತಿ ಹೆಚ್ಚಾಯಿತು. ಇದರಿಂದಾಗಿ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಜಾಸ್ತಿ ಆಗಿದೆ. ಗಿಲ್ಲಿ ನಟ ಅವರು ಪಕ್ಕಾ ಹಳ್ಳಿ ಹೈದ. ಅವರ ಆ ಗುಣವನ್ನೇ ಬಿಗ್ ಬಾಸ್ ಆಟದಲ್ಲಿ ಪ್ರೇಕ್ಷಕರು ಇಷ್ಟಪಟ್ಟಿದ್ದರು. ವಿಶೇಷ ಏನೆಂದರೆ, ಈಗ ಗಿಲ್ಲಿ ನಟ ಅವರು ಹಳ್ಳಿ ಸೊಗಡಿನ ಕಥೆ ಇರುವ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ‘ಸರ್ವೇ ನಂಬರ್ 45’ ಎಂದು ಹೆಸರು ಇಡಲಾಗಿದೆ ಎನ್ನಲಾಗಿದೆ.
ಇದರ ಕುರಿತ್ತಾಗಿ ‘ಸರ್ವೇ ನಂಬರ್ 45’ ಸಿನಿಮಾದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಗಿಲ್ಲಿ ನಟ ಅವರು ಹಳ್ಳಿ ಹೈದನ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತದಲ್ಲಿವೆ. ‘ವರನಂದಿ ಸಿನಿ ಸಂಸ್ಥೆ’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಆನಂದ್ ಎಸ್.ವಿ. ಮತ್ತು ಹನುಮಂತರೆಡ್ಡಿ ಎಸ್.ಆರ್. ಅವರು ಸಹ-ನಿರ್ಮಾಪಕರಾಗಿದಾರೆ. ಶಿವಕುಮಾರ್ ಎಂ. ಶೆಟ್ಟಿಹಳ್ಳಿ ಅವರು ‘ಸರ್ವೇ ನಂಬರ್ 45’ ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಎರಡು ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ವಿಶಾಲ್ ಅಲಾಪ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದೀಪಕ್ ಕುಮಾರ್ ಜಿ.ಕೆ. ಅವರ ಛಾಯಾಗ್ರಹಣ, ರಾಮಾರ್ಜುನ್ ಅವರ ಸಂಕಲನ, ಚಕ್ರಿ ಕಿರಿಸಾವೆ ಅವರ ಸಂಭಾಷಣೆ, ರಘು ಆರ್.ಜೆ. ಅವರ ನೃತ್ಯ ನಿರ್ದೇಶನ ಈ ಸಿನಿಮಾಗಿದೆ.
ಹಾಗೂ ಹುಣಸೂರು ಸುತ್ತಮುತ್ತ ಶೂಟಿಂಗ್ ನಡೆದಿದ್ದು ಸಿನಿಮಾದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಮುಖ್ಯ ಭೂಮಿಕೆಯಲ್ಲಿ ಗಿಲ್ಲಿ ನಟ ಅವರು ಅಭಿನಯಿಸಿದ್ದರೆ ಕಿರುತೆರೆಯ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂತೋಷ್, ಮಹಾನಟಿ ಖ್ಯಾತಿಯ ಪ್ರಾವಲಿಕ, ಮೌನ ಹಾಸನ್, ಕುಮಾರ್ ಅರಸೇಗೌಡ, ಮಾಲತಿ, ಮನು ಕಲ್ಲಹಳ್ಳಿ, ಶಿವಣ್ಣ, ಜ್ಯೂ. ದ್ವಾರಕೀಶ್, ಮಂಜು, ರಾಘವೇಂದ್ರ ಕುಮಾರ್, ವೀರೇಶ್, ಹನುಮಂತಪ್ಪ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಕಥೆಯ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ರೈತನ ಜಮೀನಿಗೆ ಸರ್ಕಾರವು ಸರ್ವೇ ನಂಬರ್ ನೀಡಿರುತ್ತದೆ. ಇದರ ಮಧ್ಯೆ ಆತನಿಗೆ ಅನೇಕ ಕಷ್ಟ ಬರುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆತನದಲ್ಲಿ ಹೇಗೆ ಬಗೆ ಹರಿಸಿಕೊಳ್ಳುತ್ತಾನೆ ಎಂಬ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ನಾವು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ತದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ನೀಡಲಾಗುವುದು ಎಂದು ತಿಳಿಸಲಾಗಿದೆ.

















