ಹಾವೇರಿ: ರಟ್ಟಿಹಳ್ಳಿ ಪೊಲೀಸ್ ಠಾಣೆ ಸಮೀಪದಲ್ಲಿಯೇ ಮಳೆಯಿಂದ ಸಿಡಿಲು ಬಡಿದಿದ್ದು ಅದರಿಂದಾಗಿ ಠಾಣೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿದ್ದು ಠಾಣೆಯ ಪಿಎಸ್ಐ ಕುಳಿತುಕೊಳ್ಳುವ ಕೊಠಡಿಯಲ್ಲಿ ಮೇ 17ರಂದು ಸಂಜೆ ನಡೆದಿರುವ ಬೆಂಕಿ ಅವಘಡದಲ್ಲಿ ಸುಮಾರು ₹ 6 ಲಕ್ಷ ಮೌಲ್ಯದ ವಸ್ತುಗಳು ಸುಟ್ಟಿವೆ. ಈ ಬಗ್ಗೆ ರಟ್ಟಿಹಳ್ಳಿ ಠಾಣೆ ಹೆಡ್ ಕಾನ್ಸ್ಟೆಬಲ್ ಶಿವಾಜಿ ರಾಮಪ್ಪ ಚವ್ಹಾಣ ದೂರು ನೀಡಿದ್ದಾರೆ. ಅದೇ ಠಾಣೆಯಲ್ಲಿಯೇ ಪ್ರಕರಣ ದಾಖಲಾಗಿದ್ದು ರಟ್ಟಿಹಳ್ಳಿ ಸುತ್ತಮುತ್ತ ಮೇ 17ರಂದು ಸಂಜೆ ಗುಡುಗು-ಸಿಡಿಲು ಸಮೇತ ಜೋರು ಮಳೆಯಾಗಿತ್ತು. ಪೊಲೀಸ್ ಠಾಣೆಯಲ್ಲಿ ಶಿವಾಜಿ ಹಾಗೂ ಇತರೆ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಕಡೂರು ಗ್ರಾಮದ ಕೆಲವರು ಠಾಣೆಯಲ್ಲಿದ್ದರು. ಸಂಜೆ 5.40 ಗಂಟೆ ಸುಮಾರಿಗೆ ಒಮ್ಮಿಂದೊಮ್ಮೆಲೆ ಸಿಡಿಲು ಬಡಿದ ಅನುಭವವಾಗಿತ್ತು ಎನ್ನಲಾಗುತ್ತಿದೆ.
ಆದರಿಂದ ಗಡಿಬಿಡಿಗೊಂಡ ಸಿಬ್ಬಂದಿ, ಭಯದಲ್ಲಿ ವೈರ್ಲೆಸ್ ಸೆಟ್ ಆಫ್ ಮಾಡಿದ್ದರು. ಬರಹಗಾರರು ಹಾಗೂ ತನಿಖಾ ಸಹಾಯಕರ ಕೊಠಡಿಯಲ್ಲಿದ್ದ ಕಂಪ್ಯೂಟರ್ ಸಹ ಆಫ್ ಮಾಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ವೈರ್ಲೆಸ್ನ ಎಲ್ಲ ಸೆಟ್ಗಳನ್ನು ಆಫ್ ಮಾಡಲಾಗಿತ್ತು. ಅದೇ ಸಮಯದಲ್ಲಿ ಠಾಣಾಧಿಕಾರಿ ಕುರ್ಚಿ ಮೇಲಿದ್ದ ವೈರ್ಲೆಸ್ ಸೆಟ್ವೊಂದರಲ್ಲಿ ಜೋರಾದ ಶಬ್ದ ಕೇಳಿಬಂದಿತ್ತು. ಅದರಿಂದ ಹೆದರಿದ್ದ ಪೊಲೀಸರು ಹಾಗೂ ಕಡೂರಿನ ಕೆಲ ಗ್ರಾಮಸ್ಥರು, ದೂರಕ್ಕೆ ಓಡಿ ಹೋಗಿದ್ದರು. 30 ನಿಮಿಷಗಳ ಕಾಲ ಗುಡುಗು-ಸಿಡಿಲು ಸಮೇತ ಮಳೆಯಾಯಿತು. ಅಲ್ಲಿಯವರೆಗೂ ಎಲ್ಲರೂ ಠಾಣೆಯ ಒಂದು ಭಾಗದಲ್ಲಿ ನಿಂತುಕೊಂಡಿದ್ದರು. ಸಂಜೆ 6.20 ಗಂಟೆಗೆ ಮಳೆ ನಿಂತಿತ್ತು. ವಿದ್ಯುತ್ ಕಡಿತಗೊಂಡಿತ್ತು’ ಎಂದು ಮೂಲಗಳು ತಿಳಿಸಿವೆ. ಮಳೆ ನಿಂತ ಬಳಿಕ ಕಡೂರು ಗ್ರಾಮಸ್ಥರು ಠಾಣೆಯಿಂದ ಹೋದರು. ಸಿಬ್ಬಂದಿ, ತಮ್ಮ ಕೆಲಸ ಮುಂದುವರಿಸಿದ್ದರು. ಕಡಿತಗೊಂಡಿದ್ದ ವಿದ್ಯುತ್ ಪುನಃ ಬಂದಿತ್ತು. ಪಿಎಸ್ಐ-2 ಅವರು ಕುಳಿತುಕೊಳ್ಳುತ್ತಿದ್ದ ಕೊಠಡಿಯಲ್ಲಿದ್ದ ಮೋಡೆಮ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಹೊಗೆಯೂ ಆವರಿಸಲಾರಂಭಿಸಿತ್ತು. ಬೆಂಕಿಯ ಕೆನ್ನಾಲಗೆಯೂ ಹೆಚ್ಚಾಗುತ್ತಿತ್ತು.
ಆದರಿಂದ ಸಮೀಪದಲ್ಲೇ ಇದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು’ ಎಂದು ಪೊಲೀಸ್ ಮೂಲಗಳು ಹೇಳಿವೆ. ಅವಘಡದಿಂದ ಕೊಠಡಿ ವಿದ್ಯುತ್ ತಂತಿಗಳು, ಲ್ಯಾನ್ ಕೇಬಲ್, ಸಿಸ್ಕೊ ಕಂಪನಿಯ ರೂಟರ್ ಹಾಗೂ ಅಡಾಪ್ಟರ್, ಬಿಎಸ್ಎನ್ಎಲ್ ಮೀಡಿಯಾ ಕನ್ವರ್ಟರ್, ಕರ್ಟನ್ಗಳು, ವೀಲ್ ಚೇರ್, ಸ್ವಿಚ್ ಬೋರ್ಡ್ ಸುಟ್ಟಿವೆ. ಠಾಣೆ ಪಕ್ಕದಲ್ಲಿಯೇ ಸಿಡಿಲು ಬಡಿದಿದ್ದರಿಂದ, ಠಾಣೆಯೊಳಗೆ ಈ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಮೂಲಗಳಿಂದ ತಿಳಿದುಬಂದಿದೆ

















