ರಾಯಚೂರು, ಮೇ.21: ವಕ್ಫ್ ಬೋರ್ಡ್ ಅನುದಾನ ದುರ್ಬಳಕೆ ಪ್ರಕರಣವನ್ನು ಲೋಕಾಯುಕ್ತದ ಮುಂದೆ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ರಾಯಚೂರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೂರು ನೀಡಿದ ಕೋಪದಿಂದಲೇ ಈ ದಾಳಿ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಯಚೂರು ನಗರದ ತಹಶಿಲ್ದಾರ್ ಕಚೇರಿ ಸಮೀಪ ಈ ಘಟನೆ ನಡೆದಿದ್ದು, ಸುಮಾರು 30 ಜನರ ಗುಂಪು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಚಾಕು, ಭರ್ಜಿ, ಕಲ್ಲು ಹಾಗೂ ಇತರೆ ಮಾರಕಾಸ್ತ್ರಗಳನ್ನು ಬಳಸಿಕೊಂಡು ದೂರುದಾರ ಸನಾವುಲ್ಲಾ ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಲಾಗಿದೆ. ನಡುರಸ್ತೆಯಲ್ಲೇ ನಡೆದ ಈ ರಕ್ತಪಾತದಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಹಿತಿಯ ಪ್ರಕಾರ, ರಾಯಚೂರು ತಾಲೂಕಿನ ತಲಮಾರಿ ಗ್ರಾಮದ ಮಸೀದಿ, ಖಬರಸ್ತಾನ ಮತ್ತು ಈದ್ಗಾ ಮೈದಾನದ ಅಭಿವೃದ್ಧಿ ಕಾಮಗಾರಿಗಳಿಗಾಗಿ 2017-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಬ್ ಹಾಗೂ ವಕ್ಫ್ ಮಂಡಳಿಯಿಂದ ಸುಮಾರು 26 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಕಾಮಗಾರಿಗಳಲ್ಲಿ ಭಾರೀ ಅಕ್ರಮ ಹಾಗೂ ಅನುದಾನ ದುರ್ಬಳಕೆ ನಡೆದಿದೆ ಎಂದು ಆರೋಪಿಸಿ ಗ್ರಾಮದ ನಿವಾಸಿ ಸನಾವುಲ್ಲಾ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಇತ್ತೀಚೆಗೆ ತಲಮಾರಿ ಗ್ರಾಮಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲನೆ ಹಾಗೂ ಸ್ಥಳ ಪರಿಶೀಲನೆ ನಡೆಸಿತ್ತು. ತನಿಖೆ ಪ್ರಾರಂಭವಾದ ಬಳಿಕ ಪ್ರಕರಣದಲ್ಲಿ ಹೆಸರು ಕೇಳಿಬಂದವರಲ್ಲಿ ಅಸಮಾಧಾನ ಉಂಟಾಗಿತ್ತು ಎನ್ನಲಾಗಿದೆ. ಬಳಿಕ ಪ್ರಕರಣವನ್ನು ರಾಜಿ ಮಾಡಿಕೊಳ್ಳುವ ನೆಪದಲ್ಲಿ ಸನಾವುಲ್ಲಾರನ್ನು ರಾಯಚೂರಿನ ತಹಶಿಲ್ದಾರ್ ಕಚೇರಿ ಬಳಿಗೆ ಕರೆಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮಾತುಕತೆ ನಡೆಯುತ್ತಿದ್ದ ವೇಳೆ ಏಕಾಏಕಿ ಪೂರ್ವಸಿದ್ಧತೆಯೊಂದಿಗೆ ಬಂದಿದ್ದ ಗುಂಪು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ದಾಳಿಯ ವೇಳೆ ಸನಾವುಲ್ಲಾ ಮತ್ತು ಅವರೊಂದಿಗೆ ಇದ್ದವರ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಸನಾವುಲ್ಲಾ ಗಂಭೀರವಾಗಿ ಗಾಯಗೊಂಡಿದ್ದು, ಅವರ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ. ವೈದ್ಯರು ಸುಮಾರು 24 ಹೊಲಿಗೆಗಳನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳು ಸನಾವುಲ್ಲಾರನ್ನು ತಕ್ಷಣ ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಆಸ್ಪತ್ರೆ ಬಳಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶುಪಟೇಲ್, ನಿಜಾಮ್ ಪಟೇಲ್, ಇರ್ಫಾನ್ ಸೇರಿದಂತೆ 15ಕ್ಕೂ ಹೆಚ್ಚು ಜನರ ವಿರುದ್ಧ ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮತ್ತೊಂದೆಡೆ ಆರೋಪಿಗಳ ಪರವಾಗಿರುವ ಕೆಲವರು ಸಹ ಸನಾವುಲ್ಲಾ ಹಾಗೂ ಅವರ ಬೆಂಬಲಿಗರ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಹಲ್ಲೆಗೆ ನಿಖರ ಕಾರಣ ಏನು, ದಾಳಿಗೆ ಸಂಚು ರೂಪಿಸಲಾಗಿತ್ತೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ವಕ್ಫ್ ಅನುದಾನ ದುರ್ಬಳಕೆ ಆರೋಪ, ಲೋಕಾಯುಕ್ತ ತನಿಖೆ ಹಾಗೂ ನಂತರ ನಡೆದ ಹಲ್ಲೆ ಪ್ರಕರಣ ಇದೀಗ ರಾಯಚೂರು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
















