ಮನೆ ರಾಜ್ಯ ಕೆಎಸ್‌ಆರ್‌ಟಿಸಿ ಬಸ್ ಫುಟ್ ಬೋರ್ಡ್ ಕುಸಿತ: ವಿದ್ಯಾರ್ಥಿನಿಯರಿಗೆ ಗಾಯ- ಪ್ರತಿಭಟನೆ

ಕೆಎಸ್‌ಆರ್‌ಟಿಸಿ ಬಸ್ ಫುಟ್ ಬೋರ್ಡ್ ಕುಸಿತ: ವಿದ್ಯಾರ್ಥಿನಿಯರಿಗೆ ಗಾಯ- ಪ್ರತಿಭಟನೆ

0

ಮೈಸೂರು(Mysuru): ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಮೆಟ್ಟಿಲು ಕುಸಿದು ಬಿದ್ದ ಪರಿಣಾಮ ಹಲವು ವಿದ್ಯಾರ್ಥಿಗಳ ಕಾಲು ಮೆಟ್ಟಿಲುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಹತ್ತಕ್ಕು ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಂಜನಗೂಡಿನ ವಳಗೆರೆ ಗ್ರಾಮದಲ್ಲಿ ನಡೆದಿದೆ.
ಕೆಎ ೦೧ ಎಫ್ ೦೧೮೪ ನಂಬರ್ ನ ಕೆಎಸ್‌ಆರ್‌ಟಿಸಿ ಬಸ್ ನಂಜನಗೂಡು ವಳಗೆರೆ ಮಾರ್ಗವಾಗಿ ಬಳ್ಳೂರು ಹುಂಡಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ವಳಗೆರೆ ಬಳಿ ಈ ದುರ್ಘಟನೆ ಸಂಭವಿಸಿದೆ.
ಬಸ್ ತುಂಬಾ ರಶ್ ಇದ್ದ ಕಾರಣಕ್ಕಾಗಿ ಮೆಟ್ಟಿಲ ಬಳಿ ವಿದ್ಯಾರ್ಥಿಗಳು ನಿಂತಿದ್ದರು. ಈ ಸಂದರ್ಭದಲ್ಲಿ ಮೆಟ್ಟಿಲು ಕುಸಿದಿದ್ದು, ವಿದ್ಯಾರ್ಥಿಗಳ ಕಾಲು ಮೆಟ್ಟಿಲಿನಲ್ಲಿ ಸಿಲುಕಿಕೊಂಡಿದೆ. ಚಾಲಕ ಬಸ್ ನಿಲ್ಲಿಸಿದ ಬಳಿಕ ಬಸ್ ಮೆಟ್ಟಿಲು ಬಳಿ ಸಿಲುಕಿದ್ದ ೬ ಕಾಲೇಜು ವಿದ್ಯಾರ್ಥಿನಿಯರನ್ನು ರಕ್ಷಣೆ ಮಾಡಲಾಗಿದೆ. ನಾಲ್ಕು ಮಂದಿ ವಿದ್ಯಾರ್ಥಿನಿಯರಿಗೆ ಕೈ ಮತ್ತು ಬೆನ್ನು ಭಾಗದಲ್ಲಿ ಗಂಭೀರ ಗಾಯವಾಗಿದೆ. ಗಾಯಗೊಂಡ ವಿದ್ಯಾರ್ಥಿನಿಯರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಅವಘಡ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭ ಮಾತನಾಡಿರುವ ವಿದ್ಯಾರ್ಥಿಗಳು, ನಂಜನಗೂಡು ತಾಲ್ಲೂಕಿನ ವಳಗೆರೆ ಗ್ರಾಮದ ಬಳಿ ಕೆಎಸ್‌ಆರ್ ಟಿಸಿ ಬಸ್ ಚಾಲಕರು ಬಸ್ ನಿಲುಗಡೆ ಮಾಡದೇ ಸಾಗುತ್ತಾರೆ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ. ಇಂದು ವಳಗೆರೆಯಲ್ಲಿ ಬಸ್ ನಿಲ್ಲಿಸಿದ್ದು, ವಿದ್ಯಾಥಿಗಳು ಬಸ್ ಹತ್ತುವ ವೇಳೆ ಬಸ್ ಮೆಟ್ಟಿಲಿನಲ್ಲಿ ತೊಂದರೆ ಇರುವುದನ್ನು ತಿಳಿಸಿದರೂ ಕೂಡ ನಿರ್ಲಕ್ಷ್ಯವಹಿಸಿದ ಕಂಡಕ್ಟರ್ ನಿಂದ ಈ ಅವಘಡ ಸಂಭವಿಸಿದೆ ಎಂದು ಕಿಡಿಕಾರಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ನಂಜನಗೂಡು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಶಂಕರ್ ಹಾಗೂ ಸಿಬ್ಬಂದಿ ಭೇಟಿ., ನಂಜನಗೂಡು ಠಾಣಾ ಪೊಲೀಸರು ಆಗಮಿಸಿ, ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದ್ದಾರೆ.