ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆಯುವ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯವರು ಮಾಡಿದ ಯಡವಟ್ಟಿನಿಂದ ನಿರಾಸೆ ಉಂಟು ಮಾಡಿದ್ದು ವಿದ್ಯಾರ್ಥಿಗಳ ಅಸಮಾಧಾನ, ಆಕ್ರೋಶ ವ್ಯಕ್ತವಾಗಿದೆ. ಹೌದು ಹಲವು ವರ್ಷಗಳಿಂದ ಕಠಿಣ ಶ್ರಮವಹಿಸಿ ಅಧ್ಯಯನ ಮಾಡಿ ಇದೀಗ ಚಿನ್ನದ ಪದಕ ಪಡೆಯುವ ಹಿಗ್ಗಿನಲ್ಲಿದ್ದರು ವಿದ್ಯಾರ್ಥಿಗಳು. ಆದರೆ ವಿಶ್ವವಿದ್ಯಾಲಯದ ಬೇಜವಾಬ್ದಾರಿ ಯಡವಟ್ಟಿನಿಂದಾಗಿ ಕೊನೆ ಕ್ಷಣದಲ್ಲಿ ಚಿನ್ನದ ಪದಕದ ಬದಲಿಗೆ ಹಣದ ಚೆಕ್ಗಳನ್ನು ನೀಡಿ ಕೈತೊಳೆದುಕೊಂಡಿರುವ ಆರೋಪ ಕೇಳಿಬಂದಿದ್ದು, ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ತುಮಕೂರು ವಿವಿ ಆಡಳಿತ ಮಂಡಳಿಯು ಚಿನ್ನದ ಪದಕಗಳ ತಯಾರಿಕೆ ಮತ್ತು ವಿತರಣೆಗಾಗಿ ಮಧ್ಯಪ್ರದೇಶ ಮೂಲದ ವ್ಯಕ್ತಿಗೆ ಗುತ್ತಿಗೆ ನೀಡಲಾಗಿತ್ತು. ಸುಮಾರು 7 ಲಕ್ಷ 90 ಸಾವಿರ ರೂಪಾಯಿ ವೆಚ್ಚದಲ್ಲಿ 119 ಚಿನ್ನ ಲೇಪಿತ ಬೆಳ್ಳಿ ಪದಕಗಳನ್ನು ತಯಾರಿಸುವ ಜವಾಬ್ದಾರಿ ನೀಡಲಾಗಿತ್ತು ಎನ್ನಲಾಗುತ್ತಿದೆ.

ಆದರೆ ಘಟಿಕೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಗುತ್ತಿಗೆದಾರ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಇದರ ಪರಿಣಾಮ ಪದಕಗಳು ವಿಶ್ವವಿದ್ಯಾಲಯಕ್ಕೆ ತಲುಪಲೇ ಇಲ್ಲ. ಆದ್ದರಿಂದ ಆಡಳಿತ ಮಂಡಳಿ ಪದಕಗಳ ಬದಲಿಗೆ ಹಣದ ಚೆಕ್ ನೀಡಿ ಕೈತೊಳೆದುಕೊಂಡಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಚಿನ್ನದ ಪದಕ ನೀಡುವ ಬದಲು ಹಣದ ಚೆಕ್ ನೀಡಿದ ವಿವಿ ಆಡಳಿತ ಮಂಡಳಿ ಕ್ರಮಕ್ಕೆ ವಿದ್ಯಾರ್ಥಿಗಳು ವೇದಿಕೆಯ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಮಗೆ ಹಣ ಬೇಡ, ನಾವು ಗಳಿಸಿದ ಚಿನ್ನದ ಪದಕವೇ ಬೇಕು’ ಎಂದು ಪಟ್ಟು ಹಿಡಿದರು. ಗುತ್ತಿಗೆದಾರನ ವಂಚನೆ, ತುಮಕೂರು ವಿವಿ ಆಡಳಿತ ಮಂಡಳಿ ಯಡವಟ್ಟಿನಿಂದಾಗಿ ನಮಗೆ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟಿಕೋತ್ಸವದಲ್ಲಾದ ಈ ಘಟನೆ ಚರ್ಚೆಗೆ ಅನುಮಾನಕ್ಕೆ ಕಾರಣವಾಗಿದೆ. ತುಮಕೂರು ವಿವಿ ಆಡಳಿತ ಮಂಡಳಿ ಚಿನ್ನದ ಪದಕಗಳ ತಯಾರಿಕೆಗೆ ಮಧ್ಯಪ್ರದೇಶ ಮೂಲದ ವ್ಯಕ್ತಿಗೆ ಗುತ್ತಿಗೆ ನೀಡಿರುವುದು ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದೆ.

ಈ ಕುರಿತು ಆತನ ಹಿನ್ನೆಲೆ, ವಿಶ್ವಾಸಾರ್ಹತೆ ಪರಿಶೀಲಿಸಲಾಗಿತ್ತೇ? ಎಂಬ ಪ್ರಶ್ನೆಗಳು ಕೇಳಿಬಂದಿವೆ. ಅಲ್ಲದೇ ಇಷ್ಟೊಂದು ಮಹತ್ವದ ಘಟಿಕೋತ್ಸವಕ್ಕೆ ಸಂಬಂಧಿಸಿದ ಕೆಲಸ ನೀಡುವಾಗ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮುಂದಾಲೋಚನೆ ಮಾಡಿರಲಿಲ್ಲವೇ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಇನ್ನೂ ಮಧ್ಯಪ್ರದೇಶ ಮೂಲದ ವ್ಯಕ್ತಿ ₹7.90 ಲಕ್ಷ ಮೊತ್ತದ ಗುತ್ತಿಗೆ ಪಡೆದು ಘಟಿಕೋತ್ಸವದ ಕೊನೆಯ ಕ್ಷಣದಲ್ಲಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿರುವುದು ಅನುಮಾನಗಳಿಗೆ ಮತ್ತಷ್ಟು ಎಡೆಮಾಡಿಕೊಟ್ಟಿದೆ. ಈ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ಅಥವಾ ನಿರ್ಲಕ್ಷ್ಯ ನಡೆದಿದೆಯೇ ಎಂಬ ಅನುಮಾನವನ್ನು ಕೆಲ ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ. ಆದರಿಂದ ಗುತ್ತಿಗೆ ನೀಡಿದ ಪ್ರಕ್ರಿಯೆಯಿಂದ ಹಿಡಿದು ಹಣಕಾಸಿನ ವ್ಯವಹಾರಗಳವರೆಗೆ ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಘಟಿಕೋತ್ಸವದ ಸಂಭ್ರಮದ ದಿನವೇ ವಿದ್ಯಾರ್ಥಿಗಳಿಗೆ ನಿರಾಸೆಯಾಗಿರುವುದರಿಂದ ಈ ಪ್ರಕರಣದ ಸತ್ಯಾಂಶ ಹೊರಬರಬೇಕು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.













