ಮನೆ ಸುದ್ದಿ ಜಾಲ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್​ ನಾಶ ̧ ಎಸ್ ​ಪಿ​ ಖಡಕ್​ ಎಚ್ಚರಿಕೆ :...

ಕರ್ಕಶ ಶಬ್ಧ ಮಾಡುವ ಸೈಲೆನ್ಸರ್​ ನಾಶ ̧ ಎಸ್ ​ಪಿ​ ಖಡಕ್​ ಎಚ್ಚರಿಕೆ : ಹಾವೇರಿ

0

ಹಾವೇರಿಜಿಲ್ಲೆಯಲ್ಲಿ ಕರ್ಕಶ ಶಬ್ಧ ಮಾಡುವ ಬೈಕ್ ಚಾಲಕರಿಗೆ ಬುಧವಾರ ಪೊಲೀಸರು ಖಡಕ್ ಎಚ್ಚರಿಕೆ ನೀಡಿದರು. ನಗರದಲ್ಲಿ ಕರ್ಕಶ ಶಬ್ಧ ಮಾಡುತ್ತ ಓಡಾಡಿದ 40 ಬೈಕ್‌ಗಳ ಸೈಲೆನ್ಸರ್ ಪೈಪ್‌ಗಳನ್ನು ಪೊಲೀಸರು ನಾಶಪಡಿಸಿದ್ದು ನಗರದ ಎಸ್ಪಿ ಕಚೇರಿಯ ಮುಂದಿನ ಆವರಣ ರಸ್ತೆಯಲ್ಲಿ ಬುಧವಾರ ನಡೆದ ಸೈಲೆನ್ಸರ್ ಪೈಪ್ ಹಾನಿ ಕಾರ್ಯಕ್ರಮಕ್ಕೆ ಎಸ್ಪಿ ಯಶೋಧಾ ವಂಟಗೋಡಿ ಚಾಲನೆ ನೀಡಿದರು. ಜೆಸಿಬಿ ವಾಹನದಿಂದ 40 ಸೈಲೆನ್ಸರ್ ಪೈಪ್‌ಗಳನ್ನು ನಾಶಪಡಿಸಲಾಯಿತು. ಪುಡಿಪುಡಿಯಾದ ಸೈಲೆನ್ಸರ್ ಪೈಪ್‌ಗಳನ್ನು ಗುಜರಿ ಅಂಗಡಿಗೆ ಹಾಕಲಾಯಿತು. ಈ ಮೂಲಕ ಹಾವೇರಿ ನಗರದಲ್ಲಿ ಸೈಲೆನ್ಸರ್​ ಪೈಪ್‌ಗಳನ್ನು ದೊಡ್ಡದು ಮಾಡಿ ಅತಿಹೆಚ್ಚು ಶಬ್ಧದ ಕಿರಿ ಕಿರಿ ಎನಿಸುವ ಬೈಕ್ ಸವಾರರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ಹೆಚ್ಚು ಶಬ್ಧ ಮಾಡುವ ಸೈಲೆನ್ಸರ್ ಪೈಪ್ ಹೊಂದಿರುವ ಬೈಕ್‌ಗಳನ್ನು ವಶಪಡಿಸಿಕೊಂಡು ಸೈಲೆನ್ಸರ್​ ಪೈಪ್ ಕಿತ್ತುಕೊಳ್ಳಲಾಗಿದೆ. ಇದರಿಂದ ಎಚ್ಚೆತ್ತು ಬೈಕ್ ಸವಾರರು ತಮ್ಮ ಬೈಕ್​ಗಳಿಗೆ ಹಾಕಿರುವ ಸೈಲೆನ್ಸರ್ ಪೈಪ್ ಸ್ವಯಂಪ್ರೇರಿತರಾಗಿ ಬದಲಾಯಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದ್ದು ಎಸ್ಪಿ ಯಶೋಧಾ ವಂಟಗೋಡಿ ಮಾತನಾಡಿ, ಪರಿಸರ ಇಲಾಖೆ ನಿಗದಿಪಡಿಸಿದ ಡೆಸಿಬಲ್‌ಗಳಲ್ಲಿ ಮಾತ್ರ ಸೈಲೆನ್ಸರ್ ಪೈಪ್ ಶಬ್ಧ ಮಾಡಬೇಕು. ಅದರ ಬದಲು ತಮಗೆ ಮನಬಂದಂತೆ ದ್ವಿಚಕ್ರವಾಹನಗಳಿಗೆ ಹೆಚ್ಚು ಶಬ್ಧ ಮಾಡುವ ಸೈಲೆನ್ಸರ್ ಪೈಪ್ ಅಳವಡಿಸುವಂತಿಲ್ಲ. ಒಂದು ವೇಳೆ ಅಳವಡಿಸಿದ್ದರೆ ಬದಲಾಯಿಸಬೇಕು. ಇಲ್ಲದಿದ್ದರೇ ಪೊಲೀಸ್ ಇಲಾಖೆ ಸೈಲೆನ್ಸರ್ ಪೈಪ್ ವಶಕ್ಕೆ ಪಡೆಯಲಿದೆ. ಅಲ್ಲದೆ ಆ ಬೈಕ್ ಸವಾರರಿಗೆ ದಂಡ ಸಹ ವಿಧಿಸಲಾಗುವುದು ಎಂದು ಎಚ್ಚರಿಸಿದರು ಎನ್ನಲಾಗುತ್ತಿದೆ.

ಈ ಕುರಿತು ಹಾವೇರಿ ಸಂಚಾರ ಪೊಲೀಸ್ ಸಿಬ್ಬಂದಿ ಹೆಚ್ಚು ಶಬ್ಧ ಮಾಡುವ ಸೈಲೆನ್ಸರ್ ಪೈಪ್ ಸೀಜ್ ಮಾಡಿದ್ದರು. ಸುಮಾರು 40 ಸೈಲೆನ್ಸರ್ ಪೈಪ್ ಸೀಜ್​ ಮಾಡಿದ್ದು, ಅವುಗಳನ್ನು ಬುಧವಾರ ನಾಶಪಡಿಸಲಾಗಿದೆ ಎಂದು ಎಸ್​ಪಿ ವಂಟಗೋಡಿ ತಿಳಿಸಿದರು. ಈ ರೀತಿ ಸೈಲೆನ್ಸರ್ ಬಳಸುವವರಿಗೆ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ದಂಡ ಸಹ ಹಾಕಲಾಗಿರುತ್ತದೆ. ಜನರಲ್ಲಿ ಸೈಲೆನ್ಸರ ಪೈಪ್ ಕುರಿತಂತೆ ಜಾಗೃತಿ ಮತ್ತು ಎಚ್ಚರಿಕೆ ನೀಡಲು ಈ ರೀತಿ ನಾಶಪಡಿಸುತ್ತಿರುವುದಾಗಿ ಹೇಳಿದರು. ಯಾರು ಸಹ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್​ ಬಳಕೆ ಮಾಡಬಾರದು. ಶಾಲೆ, ಆಸ್ಪತ್ರೆ, ವೃದ್ಧಾಶ್ರಮ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಸೈಲೆನ್ಸರ್ ಪೈಪ್ ಕರ್ಕಶ ಶಬ್ಧ ಮಾಡಬಾರದು ಎನ್ನುವ ಎಚ್ಚರಿಕೆ ನೀಡಲು ಈ ಕಾರ್ಯಾಚರಣೆ ಕೈಗೊಂಡಿದ್ದೇವೆ. ಬೈಕ್ ವ್ಹೀಲಿಂಗ್ ಮಾಡುವ ಸವಾರರ ಮೇಲೆ ಸಹ ಎರಡು ಪ್ರಕರಣ ದಾಖಲಿಸಿದ್ದೇವೆ. ಯಾರೇ ಬೈಕ್ ವ್ಹೀಲಿಂಗ್ ಮಾಡಿದರೂ ಅವರ ಫೋಟೋ ವಿಡಿಯೋ ಕಳಿಸಿದರೆ ಸಾಕು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.

ಈ ರೀತಿ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್ ಪೈಪ್ ಅಳವಡಿಸುವ ಗ್ಯಾರೇಜ್ ಮಾಲೀಕರ ಮೇಲೆ ಸಹ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಲಾಖೆ ವಶಪಡಿಸಿಕೊಂಡ ಸೈಲೆನ್ಸರ್ ಪೈಪ್‌ಗಳು ಅಲ್ಪ. ಇನ್ನೂ ಹಲವರು ಬೈಕ್‌ಗಳಿಗೆ ಸೈಲೆನ್ಸರ್​ ಪೈಪ್ ಅಳವಡಿಸಿಕೊಂಡು ಕರ್ಕಶ ಶಬ್ಧ ಮಾಡುತ್ತಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಾವೇರಿ ನಿವಾಸಿ ರಮೇಶ್ ಆನವಟ್ಟಿ ಒತ್ತಾಯಿಸಿದರು. ಆಸ್ಪತ್ರೆ ಶಾಲಾ ಕಾಲೇಜುಗಳ ಹತ್ತಿರ ಈ ರೀತಿಯ ಶಬ್ಧದ ಬೈಕ್ ಓಡಾಡುತ್ತವೆ. ಇದರಿಂದ ರಸ್ತೆಯಲ್ಲಿ ಓಡಾಡುವ ಇತರೆ ಜನರಿಗೆ ಸಹ ಕಿರಿಕಿರಿಯಾಗುತ್ತದೆ. ಈ ರೀತಿಯ ಸೈಲೆನ್ಸರ್ ಪೈಪ್ ಅಳವಡಿಸಿದ್ದ ಬೈಕ್‌ ಸವಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ಕೆಲವು ಬೈಕ್ ಸವಾರರು ಹಾರ್ನ್​ಗಳನ್ನು ಸಹ ಕರ್ಕಶ ಶಬ್ಧ ಬರುವ ರೀತಿ ಹಾಕಿರುತ್ತಾರೆ. ಅವರಿಗೆ ತಿಳುವಳಿಕೆ ಹೇಳಬೇಕು. ಇದಲ್ಲದೆ ತ್ರಿಚಕ್ರ ವಾಹನ, ಕಾರು ಅಷ್ಟೇ ಅಲ್ಲ, ಸಾರಿಗೆ ಇಲಾಖೆಯ ಬಸ್‌ಗಳು ಚಿಮಣಿ ರೀತಿ ಹೊಗೆ ಉಗುಳುತ್ತವೆ. ಅವುಗಳಿಂದ ಸಾಕಷ್ಟು ಪ್ರಮಾಣದಲ್ಲಿ ಪರಿಸರ ಸಮಸ್ಯೆ ಹಾಳಾಗುತ್ತದೆ. ಹೊಗೆ ಮತ್ತು ಶಬ್ಧದಿಂದ ಸಂಚಾರ ಯಾತನಾಮಯವಾಗಿರುತ್ತದೆ. ಆ ರೀತಿಯ ವಾಹನಳಿಗೆ ಸಹ ಕಡಿವಾಣ ಹಾಕುವಂತೆ ರಮೇಶ್ ಮನವಿ ಮಾಡಿದರು ಎಂದು ತಿಳಿದುಬಂದಿದೆ.