ಚೆನ್ನೈ (ತಮಿಳುನಾಡು): ತಮಿಳುನಾಡಿನ ಏಕೈಕ ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡುವುದಾಗಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ತಮಿಳುನಾಡು ಸಿಎಂ ಸಿ ಜೋಸೆಫ್ ವಿಜಯ್ ಘೋಷಣೆ ಮಾಡಿದ್ದಾರೆ. ಎಐಎಡಿಎಂಕೆ ನಾಯಕ ಸಿ.ವಿ.ಷಣ್ಮುಗಂ ಮೇಲ್ಮನೆಗೆ ರಾಜೀನಾಮೆ ನೀಡಿ, ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿರುವ ಹಿನ್ನೆಲೆಯಲ್ಲಿ ಈ ಸ್ಥಾನ ಖಾಲಿ ಉಳಿದಿತ್ತು. ಕಾಂಗ್ರೆಸ್ ಪಕ್ಷದ ಕೋರಿಕೆಯ ಮೇರೆಗೆ ಖಾಲಿ ಇರುವ ರಾಜ್ಯಸಭಾ ಸ್ಥಾನವನ್ನು ಕೈಗೆ ಬಿಟ್ಟುಕೊಡಲು ವಿಜಯ್ ಸಮ್ಮತಿಸಿದ್ದರು ಎಂದು ವರದಿ ತಿಳಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿಜಯ್, ಈ ತಿಂಗಳು ಜೂನ್ 18 ರಂದು ತಮಿಳುನಾಡು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ನಮ್ಮ ಟಿವಿಕೆ ಸರ್ಕಾರದ ಮೈತ್ರಿಯಾಗಿರುವ ಅಖಿಲ ಭಾರತೀಯ ಕಾಂಗ್ರೆಸ್ಗೆ ಹಂಚಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಕುರಿತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಕಾಂಗ್ರೆಸ್ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಸೇರಿದಂತೆ ರಾಷ್ಟ್ರೀಯ ಪಕ್ಷದ ನಾಯಕರ ನಡುವಿನ ಪ್ರಮುಖ ಸಭೆಗಳ ಬೆನ್ನಲ್ಲೇ ಏಕೈಕ ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್ಗೆ ನೀಡುವ ಟಿವಿಕೆ ನಿರ್ಧಾರ ಹೊರಬಿದ್ದಿದೆ. ಮುಖ್ಯಮಂತ್ರಿ ವಿಜಯ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚೋಡಂಕರ್, ತಮಿಳುನಾಡಿನಿಂದ ರಾಜ್ಯಸಭಾ ಸ್ಥಾನವನ್ನು ಪಕ್ಷ ಪಡೆಯುವ ಮೂಲಕ ಮೇಲ್ಮನೆಯಲ್ಲಿ ಕಾಂಗ್ರೆಸ್ ಉಪಸ್ಥಿತಿಯನ್ನು ಬಲಪಡಿಸಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಗೆ ಸರ್ಕಾರ ರಚಿಸಲು ಕಾಂಗ್ರೆಸ್ ಬೆಂಬಲ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲು ಟಿವಿಕೆ ತೀರ್ಮಾನಿಸಿದೆ. ಈ ಮೂಲಕ ಕಾಂಗ್ರೆಸ್ ಈ ಸ್ಥಾನವನ್ನು ಸುಲಭವಾಗಿ ಗೆದ್ದುಕೊಳ್ಳುವ ನಿರೀಕ್ಷೆಗಳಿವೆ.

ಹಾಗೂ ವಿಧಾನಸಭಾ ಚುನಾವಣೆಗೆ ಮುನ್ನ ಅಂದರೆ ಈ ಹಿಂದೆ ನಡೆದ ರಾಜ್ಯಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆಗಿನ ಒಪ್ಪಂದದ ಮೂಲಕ ಒಂದು ರಾಜ್ಯಸಭಾ ಸ್ಥಾನವನ್ನು ಪಡೆದುಕೊಂಡಿತ್ತು. ಇದೀಗ ಟಿವಿಕೆ ಮೈತ್ರಿ ಜೊತೆಗೆ ಮತ್ತೊಂದು ಸ್ಥಾನವನ್ನು ಬಲಪಡಿಸಿಕೊಳ್ಳುವಲ್ಲಿ ಪಕ್ಷ ಯಶಸ್ವಿಯಾಗಿದೆ. ಚುನಾವಣಾ ಆಯೋಗದ ಪ್ರಕಾರ, ರಾಜ್ಯಸಭಾ ಸ್ಥಾನಕ್ಕೆ ಜೂನ್ 1 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿ ಜೂನ್ 8 ಕ್ಕೆ ಕೊನೆಗೊಳ್ಳಲಿದೆ. ಜೂನ್ 9 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂನ್ 11 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ. ಜೂನ್ 18 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದೇ ಫಲಿತಾಂಶ ಹೊರ ಬೀಳಲಿದೆ ಎಂಬುದ್ದಾಗದಾಗಿದೆ.













