ಮನೆ ಸುದ್ದಿ ಜಾಲ ಮಾಜಿ ಸಚಿವ ಕೆ.ಎನ್. ರಾಜಣ್ಣ : ಹೈ ಕಮಾಂಡ್ ನಿರ್ಧಾರದ ನಂತರ ಗುಡ್ ಅಥವಾ ಬ್ಯಾಡ್...

ಮಾಜಿ ಸಚಿವ ಕೆ.ಎನ್. ರಾಜಣ್ಣ : ಹೈ ಕಮಾಂಡ್ ನಿರ್ಧಾರದ ನಂತರ ಗುಡ್ ಅಥವಾ ಬ್ಯಾಡ್ ಚಾಯ್ಸ್ ಇಲ್ಲ

0

ಬೆಂಗಳೂರು (ಜೂ.04): ಮುಖ್ಯಮಂತ್ರಿ ಬದಲಾವಣೆ ಕುರಿತಾಗಿ ತಾವು ಈ ಹಿಂದೆ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ, ಅಂತಿಮ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್‌ನದ್ದೇ ಆಗಿದ್ದು, ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದೆ. ಜೊತೆಗೆ ಅಂತಿಮವಾಗಿ ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ ಎಂದೂ ಸ್ಪಷ್ಟಪಡಿಸಿದ್ದೆ. ಸಿದ್ದರಾಮಯ್ಯ ಅವರೂ ಇದೇ ಮಾತನ್ನು ಹೇಳಿದ್ದರು. ಇದೀಗ ಹೈಕಮಾಂಡ್ ನಿರ್ಧಾರ ಕೈಗೊಂಡಿದ್ದು, ಎಲ್ಲರೂ ಅದನ್ನು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು. ರಾಜ್ಯ ರಾಜಕೀಯದ ಭವಿಷ್ಯದ ಬಗ್ಗೆ ಮಾತನಾಡಿದ ರಾಜಣ್ಣ, “ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಅಹಿಂದ ವರ್ಗಗಳಲ್ಲಿದೆ. ಅಹಿಂದ ಸಮುದಾಯಗಳನ್ನು ಎಷ್ಟರ ಮಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂಬುದರ ಮೇಲೆ ಪಕ್ಷ ಹಾಗೂ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ” ಎಂದು ಅಭಿಪ್ರಾಯಪಟ್ಟರು. ಸರ್ಕಾರದ ಹೊಸ ಯೋಜನೆಗಳು ಮತ್ತು ನಿರ್ಧಾರಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಹುಡುಗರಿಗೆ ಬಸ್ ಪಾಸ್ ಸೇರಿದಂತೆ ಕೆಲವು ಮಹತ್ವದ ತೀರ್ಮಾನಗಳನ್ನು ಸರ್ಕಾರ ಕೈಗೊಂಡಿದೆ ಎನ್ನಲಾಗಿದೆ.

ಆದರೆ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಹಣಕಾಸು ಇಲಾಖೆಯ ಅನುಮೋದನೆ ಇಲ್ಲದೆ ಯಾವುದೇ ಯೋಜನೆ ಜಾರಿಗೊಳಿಸುವುದು ಸಾಧ್ಯವಿಲ್ಲ” ಎಂದು ಹೇಳಿದರು. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಆಯ್ಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಹೈಕಮಾಂಡ್ ಒಮ್ಮೆ ನಿರ್ಧಾರ ತೆಗೆದುಕೊಂಡ ಬಳಿಕ ಅದು ಒಳ್ಳೆಯ ಆಯ್ಕೆಯೋ, ಕೆಟ್ಟ ಆಯ್ಕೆಯೋ ಎಂದು ಹೇಳುವ ಪ್ರಶ್ನೆಯೇ ಇಲ್ಲ. ನಿರ್ಧಾರಕ್ಕೂ ಮುನ್ನ ಅಭಿಪ್ರಾಯ ವ್ಯಕ್ತಪಡಿಸಬಹುದು. ಈಗ ಎಲ್ಲರೂ ನಾಯಕತ್ವದ ತೀರ್ಮಾನಕ್ಕೆ ಗೌರವ ನೀಡಬೇಕು” ಎಂದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ರಾಜಣ್ಣ, “ನಾವಿಬ್ಬರೂ ಯುವ ಕಾಂಗ್ರೆಸ್‌ನಿಂದಲೇ ಜೊತೆಯಾಗಿ ಕೆಲಸ ಮಾಡಿದ್ದೇವೆ. ಅವರು ಹೋರಾಟದ ಹಿನ್ನೆಲೆಯುಳ್ಳ ಅನುಭವಿ ನಾಯಕರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹಲವು ರಾಜ್ಯಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೇಂದ್ರ ರಾಜಕೀಯದ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಹಿಂದುಳಿದ ವರ್ಗದ ನಾಯಕನಿಗೆ ಪಕ್ಷದ ನಾಯಕತ್ವ ಅವಕಾಶ ನೀಡಿರುವುದು ಸಂತಸದ ಸಂಗತಿ. ಅವರು ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ಹಾಗೂ ಡಿ.ಕೆ. ಶಿವಕುಮಾರ್ ಮತ್ತು ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವದ ಸಂಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, “ವ್ಯಕ್ತಿಗಳ ಹೆಸರಿನ ಸಂಕ್ಷಿಪ್ತ ರೂಪಗಳ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಅವರ ಕಾರ್ಯಕ್ಷಮತೆ ಮುಖ್ಯ. ಸರ್ಕಾರ ಮತ್ತು ಪಕ್ಷ ಉತ್ತಮ ಪ್ರದರ್ಶನ ನೀಡಿದರೆ ಜನರ ಬೆಂಬಲ ದೊರೆಯುತ್ತದೆ. ಇಲ್ಲದಿದ್ದರೆ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ” ಎಂದು ಅಭಿಪ್ರಾಯಪಟ್ಟರು. ಸಲಹೆ ನೀಡುವ ವಿಚಾರವಾಗಿ ಮಾತನಾಡಿದ ರಾಜಣ್ಣ, “ನನ್ನ ಅಭಿಪ್ರಾಯ ಕೇಳಿದಾಗ ಮಾತ್ರ ನಾನು ಸಲಹೆ ನೀಡುತ್ತೇನೆ. ಕೇಳದಿದ್ದರೆ ಅನಗತ್ಯವಾಗಿ ಸಲಹೆ ನೀಡುವ ಅಭ್ಯಾಸ ನನಗಿಲ್ಲ. ಸಲಹೆಗಳನ್ನು ಆಲಿಸಿ ಸ್ವೀಕರಿಸುವ ಮನಸ್ಥಿತಿ ಇರುವವರಿಗೆ ಮಾತ್ರ ನನ್ನ ಅನುಭವ ಹಂಚಿಕೊಳ್ಳುತ್ತೇನೆ” ಎಂದರು. ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗುವ ಕುರಿತು ಪ್ರತಿಕ್ರಿಯಿಸಿದ ಅವರು, “ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಸಹಜವಾಗಿಯೇ ಮುಂದಿನ ದಿನಗಳಲ್ಲಿ ಅವರನ್ನು ಭೇಟಿ ಮಾಡುತ್ತೇನೆ” ಎಂದು ಹೇಳಿದರು ಎಂಬುದ್ದಾಗಿದೆ.