ಬೆಂಗಳೂರು(Bengaluru): ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಮಳೆಹಾನಿ ಪ್ರದೇಶಗಳ ಪರಿಶೀಲನೆ ನಡೆಸಲು ನಾಳೆಯಿಂದ ಎರಡು ದಿನಗಳ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಕಳೆದ 10 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ನಾಳೆಯಿಂದ ಎರಡು ದಿನಗಳ ಜಿಲ್ಲಾ ಪ್ರವಾಸ ಮಾಡುತ್ತೇವೆ. ನಾಳೆ ಕೊಡಗು ಉಡುಪಿ ಕಾರವಾರ ಜಿಲ್ಲೆಗೆ ಭೇಟಿ ನೀಡುತ್ತೇನೆ.
ಕೊಡಗಿನಲ್ಲಿ ಮಳೆ ಹಾನಿ, ಭೂಕುಸಿತ ಪರಿಶೀಲನೆ ನಡೆಸುತ್ತೇನೆ. ಜೊತೆಗೆ ಮಳೆ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸುತ್ತೇವೆ. ಸಂತ್ರಸ್ತರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ. ಬಳಿಕ ಮಂಗಳೂರಿನಲ್ಲಿ ವಾಸ್ತವ್ಯ ಹೂಡಿ ನಾಡಿದ್ದು ಮಂಗಳೂರಿನಲ್ಲಿ ಉಡುಪಿ ಕಾರಾವಾರದಲ್ಲಿ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.