ಬೆಂಗಳೂರು, ಜೂನ್ 9: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಬಿಟ್‌ಕಾಯಿನ್ ಹಗರಣದ ತನಿಖೆ ವೇಗ ಪಡೆದುಕೊಂಡಿದ್ದು, ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಕಾಣಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ನ್ಯಾಯಾಲಯಕ್ಕೆ ಸುದೀರ್ಘ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ನಲಪಾಡ್ ಅವರಿಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವ ಕುರಿತು ಮಹತ್ವದ ವಿವರಗಳನ್ನು ದಾಖಲಿಸಲಾಗಿದೆ. ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ನಲಪಾಡ್ ನಡುವಿನ ಹಣಕಾಸು ವ್ಯವಹಾರಗಳ ಉಲ್ಲೇಖವೂ ದೋಷಾರೋಪ ಪಟ್ಟಿಯಲ್ಲಿ ಸೇರಿದೆ.
ಶ್ರೀಕಿಯ ಬಿಟ್‌ಕಾಯಿನ್ ನಗದೀಕರಣದಲ್ಲಿ ನಲಪಾಡ್ ಪಾತ್ರದ ಆರೋಪ
ಎಸ್‌ಐಟಿ ಸಲ್ಲಿಸಿರುವ ಚಾರ್ಜ್ ಶೀಟ್ ಪ್ರಕಾರ, ಪ್ರಮುಖ ಆರೋಪಿ ಹಾಗೂ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಅಕ್ರಮವಾಗಿ ಸಂಪಾದಿಸಿದ್ದ ಬಿಟ್‌ಕಾಯಿನ್ ಗಳನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿಕೊಳ್ಳಲು ಮೊಹಮ್ಮದ್ ನಲಪಾಡ್ ಅವರ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ.

ನಲಪಾಡ್ ತಮ್ಮ ಮುಂಬೈ ಮೂಲದ ಸ್ನೇಹಿತರು ಹಾಗೂ ರಾಬಿನ್ ಖಂಡೇವಾಲ ಅವರ ಸಹಾಯದಿಂದ ಈ ಬಿಟ್‌ಕಾಯಿನ್ ಗಳನ್ನು ಹವಾಲಾ ಜಾಲದ ಮೂಲಕ ನಗದೀಕರಿಸಲು ನೆರವಾದ ಆರೋಪ ಕೇಳಿಬಂದಿದೆ. ಈ ಪ್ರಕ್ರಿಯೆಯಲ್ಲಿ ಗಣನೀಯ ಪ್ರಮಾಣದ ಕಮಿಷನ್ ನಲಪಾಡ್ ಅವರಿಗೆ ಸಂದಿದೆ ಎಂಬುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಎಸ್‌ಐಟಿ ಪತ್ತೆಹಚ್ಚಿದ್ದು, ಅವುಗಳನ್ನು ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ನಲಪಾಡ್ ಅವರ ಬ್ಯಾಂಕ್ ಖಾತೆಗೆ ಜಮೆಯಾಗಿದ್ದ 10 ಲಕ್ಷ ರೂಪಾಯಿಗಳ ಅನುಮಾನಾಸ್ಪದ ಹಣ ವರ್ಗಾವಣೆ ಪ್ರಕರಣವೇ ತನಿಖೆಯನ್ನು ಮತ್ತಷ್ಟು ವಿಸ್ತರಿಸಲು ಕಾರಣವಾಗಿತ್ತು ಎಂದು ಹೇಳಲಾಗಿದೆ.
ಮನೆಗಳ ಮೇಲೆ ದಾಳಿ, ಇಡಿ ತನಿಖೆ ಚುರುಕು
ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಹಾಗೂ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಹಲವು ಡಿಜಿಟಲ್ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದರು.

ಪ್ರಕರಣದಲ್ಲಿ ಮನಿ ಲಾಂಡರಿಂಗ್ ಆರೋಪಗಳೂ ಕೇಳಿಬಂದಿರುವ ಹಿನ್ನೆಲೆಯಲ್ಲಿ ಇಡಿ ಪ್ರತ್ಯೇಕ ತನಿಖೆ ಕೈಗೊಂಡಿದೆ. ಈಗಾಗಲೇ ಶ್ರೀಕಿ, ಸುನೀಶ್ ಹೆಗ್ಡೆ ಹಾಗೂ ರಾಬಿನ್ ಖಂಡೇವಾಲ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ದಾಳಿಯ ಬಳಿಕ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಇಡಿ ಎರಡು ಬಾರಿ ನೋಟಿಸ್ ಜಾರಿ ಮಾಡಿತ್ತು. ಆದರೆ ತನಿಖೆಗೆ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬ ಕಾರಣದಿಂದ, ಎಸ್‌ಐಟಿ ಚಾರ್ಜ್ ಶೀಟ್ ಆಧರಿಸಿ ಮೂರನೇ ಬಾರಿ ನೋಟಿಸ್ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಇದರಿಂದ ಮುಂದಿನ ದಿನಗಳಲ್ಲಿ ಮೊಹಮ್ಮದ್ ನಲಪಾಡ್ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.














