ನವದೆಹಲಿ, ಜೂನ್ 09: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಮಹತ್ವದ ಬದಲಾವಣೆ ಘೋಷಿಸಿದೆ. ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ ಲಭ್ಯವಾಗುತ್ತಿದ್ದ ಸಬ್ಸಿಡಿ ಸಿಲಿಂಡರ್ ಮರುಪೂರಣಗಳ ಸಂಖ್ಯೆಯನ್ನು ಒಂಬತ್ತರಿಂದ ನಾಲ್ಕಕ್ಕೆ ಇಳಿಸಲಾಗಿದೆ. ಇದರೊಂದಿಗೆ ಉಜ್ವಲ ಯೋಜನೆಯಡಿ ನೋಂದಾಯಿತ ಕುಟುಂಬಗಳು ಇನ್ನು ಮುಂದೆ ವರ್ಷಕ್ಕೆ ಕೇವಲ ನಾಲ್ಕು ಸಿಲಿಂಡರ್ ಗಳಿಗೆ ಹೆಚ್ಚುವರಿ ಸಬ್ಸಿಡಿ ಪಡೆಯಲಿವೆ.
ಪ್ರಸ್ತುತ ದೇಶಾದ್ಯಂತ 10.60 ಕೋಟಿ ಎಲ್‌ಪಿಜಿಸಂಪರ್ಕಗಳನ್ನು ಉಜ್ವಲ ಯೋಜನೆಯಡಿ ವಿತರಿಸಲಾಗಿದ್ದು, ಇದುವರೆಗೆ ಫಲಾನುಭವಿಗಳಿಗೆ ವರ್ಷಕ್ಕೆ ಒಂಬತ್ತು ಸಬ್ಸಿಡಿ ಸಿಲಿಂಡರ್ ಗಳ ಸೌಲಭ್ಯ ದೊರೆಯುತ್ತಿತ್ತು.
ಸರಾಸರಿ ಬಳಕೆಯನ್ನು ಆಧರಿಸಿ ನಿರ್ಧಾರ
ಈ ಬದಲಾವಣೆಗೆ ಕಾರಣವಾಗಿ ಫಲಾನುಭವಿಗಳ ಸರಾಸರಿ ಬಳಕೆಯ ಅಂಕಿ-ಅಂಶಗಳನ್ನು ಸರ್ಕಾರ ಉಲ್ಲೇಖಿಸಿದೆ. 2016ರಲ್ಲಿ ಆರಂಭವಾದ ಉಜ್ವಲ ಯೋಜನೆಯಡಿ ಮೊದಲಿಗೆ ಫಲಾನುಭವಿಗಳಿಗೆ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್ ಗಳು ಲಭ್ಯವಿದ್ದವು. ಬಳಿಕ ಈ ಸಂಖ್ಯೆಯನ್ನು ಒಂಬತ್ತಕ್ಕೆ ಇಳಿಸಲಾಗಿತ್ತು. ಇದೀಗ ಅದನ್ನು ನಾಲ್ಕಕ್ಕೆ ಸೀಮಿತಗೊಳಿಸಲಾಗಿದೆ.

ಪೆಟ್ರೋಲಿಯಂ ಸಚಿವಾಲಯದ ಪ್ರಕಾರ, ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸಬ್ಸಿಡಿ ವಿತರಣಾ ವ್ಯವಸ್ಥೆಯಲ್ಲಿ ಈ ಬದಲಾವಣೆ ತರಲಾಗಿದೆ.
ಜಾಗತಿಕ ಬಿಕ್ಕಟ್ಟಿನ ನಡುವೆಯೂ ಇಂಧನ ಪೂರೈಕೆ ಸ್ಥಿರ
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಹಾರ್ಮುಜ್ ಜಲಸಂಧಿಯ ಮಾರ್ಗದಲ್ಲಿ ಎದುರಾಗಿರುವ ಸವಾಲುಗಳ ನಡುವೆಯೂ ದೇಶದಲ್ಲಿ ಇಂಧನ ಪೂರೈಕೆಯನ್ನು ನಿರಂತರವಾಗಿ ಕಾಪಾಡುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಪಿಜಿಬೆಲೆಗಳು ಶೇ. 46 ರಷ್ಟು ಏರಿಕೆಯಾಗಿದ್ದರೂ, ಭಾರತೀಯ ತೈಲ ಸಂಸ್ಕರಣಾಗಾರಗಳು ದೇಶೀಯ ಉತ್ಪಾದನೆಯನ್ನು ಶೇ. 60 ರಷ್ಟು ಹೆಚ್ಚಿಸಿ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಿವೆ.
ಹೊಸ ರಾಷ್ಟ್ರಗಳಿಂದ ಎಲ್‌ಪಿಜಿ ಆಮದು
ಭಾರತ ತನ್ನ ಎಲ್‌ಪಿಜಿಅಗತ್ಯದ ಸುಮಾರು ಶೇ. 70 ರಷ್ಟನ್ನು ಹಾರ್ಮುಜ್ ಜಲಸಂಧಿಯ ಮೂಲಕ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರವು ಓಮನ್, ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಪರ್ಯಾಯ ರಾಷ್ಟ್ರಗಳಿಂದ ಎಲ್‌ಪಿಜಿಆಮದು ಮಾಡುವ ವ್ಯವಸ್ಥೆ ರೂಪಿಸಿದೆ.

ಬುಕಿಂಗ್ ಗಿಂತ ಹೆಚ್ಚಿನ ಪೂರೈಕೆ
ಕಳೆದ ನಾಲ್ಕು ದಿನಗಳಲ್ಲಿ ದೇಶಾದ್ಯಂತ ಪ್ರತಿದಿನ ಸರಾಸರಿ 42 ಲಕ್ಷ ಎಲ್‌ಪಿಜಿಸಿಲಿಂಡರ್ ಗಳ ಬುಕಿಂಗ್ ದಾಖಲಾಗಿದ್ದರೆ, ತೈಲ ಕಂಪನಿಗಳು ದಿನಕ್ಕೆ 44 ಲಕ್ಷ ಸಿಲಿಂಡರ್ ಗಳ ಪೂರೈಕೆ ಮಾಡುತ್ತಿವೆ. ಹೆಚ್ಚಿದ ದೇಶೀಯ ಉತ್ಪಾದನೆಯಿಂದಾಗಿ ಪೂರೈಕೆ ಪರಿಸ್ಥಿತಿ ಸುಧಾರಿಸಿದೆ ಎಂದು ಸರ್ಕಾರ ಹೇಳಿದೆ.
ಗ್ರಾಹಕರ ಬಳಕೆ ಕೇವಲ 4 ರಿಂದ 5 ಸಿಲಿಂಡರ್
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನುಜಾ ಮಾತನಾಡಿ, ಉಜ್ವಲ ಯೋಜನೆಯಡಿ ಸಂಪರ್ಕ ಪಡೆದಿರುವ 10.60 ಕೋಟಿ ಗ್ರಾಹಕರು ವರ್ಷಕ್ಕೆ ಸರಾಸರಿ 4 ರಿಂದ 5 ಸಿಲಿಂಡರ್ ಗಳನ್ನು ಮಾತ್ರ ಬಳಸುತ್ತಿದ್ದಾರೆ. ಹೀಗಾಗಿ ನೈಜ ಬಳಕೆಯನ್ನು ಪರಿಗಣಿಸಿ ವರ್ಷಕ್ಕೆ ನಾಲ್ಕು ಸಿಲಿಂಡರ್ ಗಳಿಗೆ 300 ರೂ. ನೇರ ಸಬ್ಸಿಡಿ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದರಿಂದ ಸಾಮಾನ್ಯ ಬಡ ಕುಟುಂಬಗಳ ಮಾಸಿಕ ವೆಚ್ಚದ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಸಬ್ಸಿಡಿ ಮತ್ತು ಬೆಲೆ ವಿವರ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಿಂದಾಗಿ ಒಂದು ಎಲ್‌ಪಿಜಿಸಿಲಿಂಡರ್ ನ ಪೂರೈಕೆ ವೆಚ್ಚವು 1,600 ರೂ. ಗಡಿ ದಾಟಿದ್ದರೂ, ಸಾಮಾನ್ಯ ಗ್ರಾಹಕರಿಗೆ 942 ರೂ. ಚಿಲ್ಲರೆ ದರದಲ್ಲಿ ಸಿಲಿಂಡರ್ ಒದಗಿಸಲಾಗುತ್ತಿದೆ.
ಈ ಮೂಲಕ ಉಜ್ವಲ ಮತ್ತು ಇತರ ಸಾಮಾನ್ಯ ಗ್ರಾಹಕರಿಗೆ ಪ್ರತಿ ಸಿಲಿಂಡರ್ ಮೇಲೆ ಸುಮಾರು 700 ರೂ. ರಿಯಾಯಿತಿ ನೀಡಲಾಗುತ್ತಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಹೆಚ್ಚುವರಿ 300 ರೂ. ಸಬ್ಸಿಡಿ ದೊರೆಯುವುದರಿಂದ ಮೊದಲ ನಾಲ್ಕು ಸಿಲಿಂಡರ್ ಗಳು 642 ರೂ. ದರದಲ್ಲಿ ಲಭ್ಯವಾಗಲಿವೆ. ನಂತರದ ಸಿಲಿಂಡರ್ ಗಳು 942 ರೂ. ದರದಲ್ಲೇ ಸಿಗಲಿವೆ.
52 ಸಾವಿರ ಕೋಟಿ ರೂ. ನೆರವು
ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಕೇಂದ್ರ ಸರ್ಕಾರವು ತೈಲ ಮಾರುಕಟ್ಟೆ ಕಂಪನಿಗಳಿಗೆ ಒಟ್ಟು 52 ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟದಲ್ಲಿ ನಷ್ಟ ಎದುರಾದರೂ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬೀಳದಂತೆ ಬೆಲೆಗಳನ್ನು ನಿಯಂತ್ರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಗ್ರಾಮೀಣ ಪ್ರದೇಶಗಳ ಮಹಿಳೆಯರು ಮರದ ಉರಿ ಹಾಗೂ ಸಗಣಿ ಬಳಕೆಯಿಂದ ಉಂಟಾಗುವ ಹೊಗೆಯಿಂದ ಮುಕ್ತರಾಗಿ ಶುದ್ಧ ಇಂಧನ ಬಳಕೆಯನ್ನು ಮುಂದುವರಿಸಲು ಈ ನೀತಿ ಸಹಕಾರಿಯಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.














