ಬೆಂಗಳೂರು: ರಾಜ್ಯದ ಖಾಸಗಿ ಬಸ್ ಪ್ರಯಾಣಿಕರಿಗೆ ಇಂದಿನಿಂದ ಹೆಚ್ಚುವರಿ ವೆಚ್ಚದ ಹೊರೆ ಎದುರಾಗಿದ್ದು, ಖಾಸಗಿ ಬಸ್ ಗಳ ಟಿಕೆಟ್ ದರವನ್ನು ಶೇ. 5 ರಿಂದ 8ರಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಡೀಸೆಲ್ ಬೆಲೆ ಏರಿಕೆ, ವಾಹನಗಳ ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ ಹಾಗೂ ಸಿಬ್ಬಂದಿ ವೇತನದ ಭಾರದಿಂದಾಗಿ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಖಾಸಗಿ ಬಸ್ ಮಾಲೀಕರು ತಿಳಿಸಿದ್ದಾರೆ.

ಸ್ಟೇಜ್ ಕ್ಯಾರಿಯೇಜ್ ಬಸ್ ಗಳ ಟಿಕೆಟ್ ದರ ಹೆಚ್ಚಳ ಕುರಿತು ಫೆಡರೇಷನ್ ಆಫ್ ಸ್ಟೇಜ್ ಕ್ಯಾರಿಯೇಜ್ ಬಸ್ ಆಪರೇಟರ್ಸ್ ಅಸೋಸಿಯೇಷನ್ ರಾಜ್ಯ ಘಟಕ ಅಧಿಕೃತವಾಗಿ ಮಾಹಿತಿ ನೀಡಿದೆ. ಡೀಸೆಲ್ ದರ ಏರಿಕೆಯ ಪರಿಣಾಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಟಿಕೆಟ್ ದರವನ್ನು ಶೇ. 5 ರಿಂದ ಶೇ. 8ರವರೆಗೆ ಹೆಚ್ಚಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಕುರಿತು ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್, ಕೇಂದ್ರ ಸರ್ಕಾರ ಕಳೆದ ಕೆಲವು ಅವಧಿಯಲ್ಲಿ ಡೀಸೆಲ್ ದರವನ್ನು ಒಟ್ಟು 8.17 ರೂ. ಹೆಚ್ಚಿಸಿದೆ. ಇದಲ್ಲದೆ ರಾಜ್ಯ ಸರ್ಕಾರವೂ ಒಂದು ವರ್ಷದ ಹಿಂದೆ ಡೀಸೆಲ್ ಮೇಲಿನ ದರವನ್ನು 3 ರೂ. ಹೆಚ್ಚಿಸಿತ್ತು ಎಂದು ಹೇಳಿದ್ದಾರೆ.

ವಾಹನಗಳ ಬಿಡಿಭಾಗಗಳ ಬೆಲೆ ಏರಿಕೆಯಾಗಿದ್ದು, ಟಯರ್ ರಿಸೋಲಿಂಗ್ ವೆಚ್ಚ, ಟೋಲ್ ಶುಲ್ಕ, ನೌಕರರ ವೇತನ, ತೆರಿಗೆ ಹಾಗೂ ವಿಮಾ ವೆಚ್ಚಗಳೂ ಹೆಚ್ಚಾಗಿವೆ. ಈ ಎಲ್ಲಾ ಕಾರಣಗಳಿಂದ ಟಿಕೆಟ್ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದರ ಏರಿಕೆಯ ಪರಿಣಾಮ ರಾಜ್ಯದ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಖಾಸಗಿ ಬಸ್ ಪ್ರಯಾಣಿಕರ ಪ್ರಯಾಣ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.














