ಬಾಲಿವುಡ್ನ ಅತ್ಯಂತ ಯಶಸ್ವಿ ಸೂಪರ್ ಹೀರೋ ಫ್ರಾಂಚೈಸಿ ‘ಕ್ರಿಶ್’ ಸರಣಿಯ ಮುಂದಿನ ಭಾಗ ‘ಕ್ರಿಶ್ 4’ ಬಗ್ಗೆ ಸದ್ಯ ಬಿ-ಟೌನ್ನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಚಿತ್ರದ ಮೂಲಕ ನಟ ಹೃತಿಕ್ ರೋಷನ್ ನಿರ್ದೇಶಕರಾಗಿ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದು, ಸಿನಿಮಾ ಬಜೆಟ್ ವಿಷಯವಾಗಿ ದೊಡ್ಡ ವದಂತಿಗಳು ಹರಿದಾಡುತ್ತಿದ್ದವು. ಚಿತ್ರದ ಅದ್ದೂರಿ ಮೇಕಿಂಗ್ ಹಾಗೂ ಗ್ರಾಫಿಕ್ಸ್ ಸಲುವಾಗಿ ಹೃತಿಕ್ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಗೆ ಈಗ ಅವರ ತಂದೆ, ಹಿರಿಯ ನಿರ್ದೇಶಕ ರಾಕೇಶ್ ರೋಷನ್ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವದಂತಿಗಳ ಬಗ್ಗೆ ಆಕ್ರೋಶ ಹೊರಹಾಕಿರುವ ರಾಕೇಶ್ ರೋಷನ್, ಇವೆಲ್ಲವೂ ಕೇವಲ ಸುಳ್ಳು ಸುದ್ದಿಗಳು ಎಂದು ಹೇಳಿದ್ದಾರೆ. ‘ಹೃತಿಕ್ ವರ್ಲ್ಡ್ ಕ್ಲಾಸ್ ಆ್ಯಕ್ಷನ್ ಹಾಗೂ ವಿಎಫ್ಎಕ್ಸ್ಗಾಗಿ 500 ಕೋಟಿ ರೂ. ಬಜೆಟ್ ಕೇಳಿದ್ದಾನೆ ಎನ್ನಲಾಗಿದೆ.

ಆದರೆ ಚಿತ್ರದ ಸಹ-ನಿರ್ಮಾಪಕರಾದ ಯಶ್ ರಾಜ್ ಫಿಲ್ಮ್ಸ್ ಬಜೆಟ್ ಅನ್ನು 350 ಕೋಟಿ ರೂಪಾಯಿಗೆ ಸೀಮಿತಗೊಳಿಸಲು ಬಯಸಿದೆ ಎಂಬುದೆಲ್ಲಾ ಶುದ್ಧ ಸುಳ್ಳು’ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ‘ಇಂತಹ ದೊಡ್ಡ ಮಟ್ಟದ ಮತ್ತು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಸಿನಿಮಾವನ್ನು ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ನಾನು ಕೂಡ ‘ಕ್ರಿಶ್’ ಸರಣಿಯ ಹಿಂದಿನ ಸಿನಿಮಾಗಳನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಂಡಿದ್ದೆ’ ಎಂದು ರಾಕೇಶ್ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಸೆಟ್ಟೇರುವುದು ತಡವಾಗುತ್ತಿರುವ ಬಗ್ಗೆ ಮಾತನಾಡಿದ ರಾಕೇಶ್, ‘ಯಾರೊಂದಿಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲವೂ ಸುಗಮವಾಗಿ ಸಾಗುತ್ತಿದೆ. ಪ್ರಸ್ತುತ ಹೃತಿಕ್ ತನ್ನದೇ ಆದ ಸ್ವಂತ ಪ್ರೊಡಕ್ಷನ್ ಹೌಸ್ನ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾನೆ. ಕ್ರಿಶ್ ಈಗ ಬೇರೆಯದೇ ಲೋಕದಲ್ಲಿದ್ದಾನೆ. ನಾವೆಲ್ಲರೂ ಆತನ ಡೇಟ್ಸ್ಗಾಗಿ ಕಾಯುತ್ತಿದ್ದೇವೆ’ ಎಂದು ನಗುತ್ತಾ ಉತ್ತರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಚಿತ್ರಕಥೆ ಅಂತಿಮ ಹಂತದಲ್ಲಿದ್ದು ಈ ವರ್ಷದ ಅಂತ್ಯದ ವೇಳೆಗೆ ಸಿನಿಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.

ಆದರಿಂದ ಈ ಬಾರಿ ರಾಕೇಶ್ ರೋಷನ್ ತಮ್ಮ ಹೆಮ್ಮೆಯ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಮಗ ಹೃತಿಕ್ ರೋಷನ್ಗೆ ಹಸ್ತಾಂತರಿಸಿದ್ದಾರೆ. ‘ಕ್ರಿಶ್ ಚಿತ್ರದ ಪ್ರತಿ ಹಂತವನ್ನೂ ಹೃತಿಕ್ ನನ್ನ ಜೊತೆಯಲ್ಲೇ ಉಸಿರಾಡಿದ್ದಾನೆ ಮತ್ತು ಕನಸು ಕಂಡಿದ್ದಾನೆ. ಮುಂದಿನ ದಶಕದ ಪ್ರೇಕ್ಷಕರಿಗೆ ಕ್ರಿಶ್ ಜರ್ನಿಯನ್ನು ಹೇಗೆ ಕೊಂಡೊಯ್ಯಬೇಕೆಂಬ ಬಗ್ಗೆ ಆತನಿಗೆ ಸ್ಪಷ್ಟ ಹಾಗೂ ಮಹತ್ವಾಕಾಂಕ್ಷೆಯ ವಿಷನ್ ಇದೆ. ನಮ್ಮ ಇಡೀ ಕುಟುಂಬಕ್ಕೆ ಅತ್ಯಂತ ಆಪ್ತವಾದ ಈ ಸಿನಿಮಾಗೆ ಆತ ನಿರ್ದೇಶನ ಮಾಡುತ್ತಿರುವುದನ್ನು ಕಂಡು ನನಗೆ ಹೆಮ್ಮೆ ಎನಿಸುತ್ತಿದೆ’ ಎಂದು ರಾಕೇಶ್ ರೋಷನ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.














