ವಿಶಾಖಪಟ್ಟಣಂ, ಆಂಧ್ರಪ್ರದೇಶ: ವಿಶಾಖಪಟ್ಟಣಂನ ಉಕ್ಕು ಸ್ಥಾವರದಲ್ಲಿ ಉಂಟಾದ ಭೀಕರ ದುರಂತದಲ್ಲಿ 8 ಜನರು ಸಾವನ್ನಪ್ಪಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 1,540 ಡಿಗ್ರಿ ಸೆಲ್ಸಿಯಸ್ ಶಾಖದಲ್ಲಿದ್ದ ಸ್ಥಾವರವೊಂದು ಸ್ಫೋಟಗೊಂಡ ಪರಿಣಾಮ ಅಲ್ಲಿದ್ದ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಇನ್ನು ದುರಂತದ ಹಿಂದಿನ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಈ ದುರಂತದಲ್ಲಿ ಸಾವನ್ನಪ್ಪಿದ್ದ 8 ಉದ್ಯೋಗಿಗಳದ್ದು ಒಂದೊಂದು ಕಥೆ, ತಮ್ಮದಲ್ಲದ ಶಿಫ್ಟ್ನಲ್ಲಿ ಕಾರ್ಯ ನಿರ್ವಹಿಸಿ, ಈ ದುರಂತಕ್ಕೆ ಒಳಗಾಗುವಂತೆ ಆಗಿರುವ ಘಟನೆಗಳು ನೋವು ತರಿಸಿದೆ. ಈ ದುರಂತದಲ್ಲಿ ಅಗನಂಪುಡಿ ಪ್ರದೇಶದ ಡೊಂಕಡ ಪುನರ್ವಸತಿ ಕಾಲೋನಿಯ ನಿವಾಸಿ ನಕ್ಕರಾಜು ಅಪ್ಪಲರಾಜು (40) ಕೂಡ ಸಾವನ್ನಪ್ಪಿದ್ದಾರೆ. ಎಸ್ಎಂಎಸ್ -1 ಇಲಾಖೆಯಲ್ಲಿ ಗುತ್ತಿಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಈತ ಸೋಮವಾರ ವಾರದ ರಜೆ ಇತ್ತು. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಕೇಳಿಕೊಂಡಿದ್ದ ಹಿನ್ನಲೆ ತಮ್ಮ ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ದುರದೃಷ್ಟವಶಾತ್ ಇದೀಗ ಈ ದುರಂತದಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಹಾಗೂ ಗೊಂಥಿನಾ ಭಾನುಕುಮಾರ್ (32) ಎಸ್ಎಂಎಸ್ -1ರಲ್ಲಿ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಸೋಮವಾರ ಸಿ ಶಿಫ್ಟ್ನಲ್ಲಿ ಕೆಲಸ ಮಾಡಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಬಿ ಶಿಫ್ಟ್ನಲ್ಲಿ ಕೆಲಸ ಮಾಡಲು ಇನ್ನೊಬ್ಬ ಉದ್ಯೋಗಿಯೊಂದಿಗೆ ತಮ್ಮ ಕೆಲಸದ ಸಮಯವನ್ನು ಬದಲಾಯಿಸಿಕೊಂಡಿದ್ದು, ಇದೀಗ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ನಕ್ಕ ವೆಂಕಟರಮಣ (50) ನಕ್ಕಪಲ್ಲಿಯವರಾದರೂ ಮದೀನಬಾಗ್ ಬಳಿಯ ಸತ್ತಾರ್ ಕಾಲೋನಿಯಲ್ಲಿ ನಿವಾಸಿಯಾಗಿದ್ದಾರೆ. ಉದ್ಯೋಗಕ್ಕಾಗಿ 30 ವರ್ಷಗಳ ಹಿಂದೆ ಮದೀನಬಾಗ್ಗೆ ತೆರಳಿ ಅಲ್ಲಿ ನೆಲೆಸಿದ್ದರು. ಕಳೆದ 20 ವರ್ಷಗಳಿಂದ ಉಕ್ಕಿನ ಸ್ಥಾವರದಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಬಿ ಶಿಫ್ಟ್ನಲ್ಲಿ ಅವರು ಕರ್ತವ್ಯ ನಿರ್ವಹಿಸುವಾಗ ಈ ದುರಂತ ಸಂಭವಿಸಿದ್ದು, ಈ ಘಟನೆ ಅವರ ಕುಟುಂಬವನ್ನು ಆಘಾತಕ್ಕೆ ತಳ್ಳಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡ ಗುತ್ತಿಗೆ ಕಾರ್ಮಿಕ ಜಿ. ಸೂರಿಬಾಬು ದುರಂತ ನಡೆದ ಸಂದರ್ಭದಲ್ಲಿ ಅಸಹನೀಯ ಶಾಖದ ಹಿನ್ನೆಲೆ ಸ್ನಾನ ಮಾಡಲು ಎಸ್ಎಂಎಸ್-1ರಲ್ಲಿ ಸಿಸಿಡಿ ವಾಶ್ರೂಮ್ಗೆ ಹೋಗಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಅವರು ಗಂಭೀರವಾಗಿ ಗಾಯಗೊಂಡಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ. ಘಟನೆ ಸಂದರ್ಭದಲ್ಲಿ ಎಲ್ಲೆಡೆ ಜ್ವಾಲೆಗಳು ಮತ್ತು ಸುಡುವ ಶಾಖದಿಂದ ಪರಿಸ್ಥಿತಿ ಹೇಗಿದೆಯೆಂದರೆ, ಗಾಯಗೊಂಡ ಕಾರ್ಮಿಕರನ್ನು ರಕ್ಷಿಸಲು ಮುಂದೆ ಬರಲು ಸಹ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಸಹೋದ್ಯೋಗಿಗಳು ವಿಷಾದಿಸಿದರು ಎಂಬುದ್ದಾಗಿದೆ.














