ಮನೆ ಸುದ್ದಿ ಜಾಲ ಕಾರವಾರ : ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣ ಆರೋಪಿ ಬಂಧನ

ಕಾರವಾರ : ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣ ಆರೋಪಿ ಬಂಧನ

0

ಕಾರವಾರ: ತಾಲೂಕಿನಾದ್ಯಂತ ವಿವಿಧ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳ್ಳತನ ನಡೆಸುತ್ತಿದ್ದ ಖದೀಮನನ್ನು ಕಾರವಾರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗಿಂಡಿವಾಡದ ವಿನಯ್ ದಯಾನಂದ ಗಾಂವಕರ್ ಎಂದು ಗುರುತಿಸಲಾಗಿದೆ. ​ಆರೋಪಿಯಿಂದ ದೇವಸ್ಥಾನಗಳಲ್ಲಿ ಕಳವು ಮಾಡಲಾಗಿದ್ದ ಗಂಟೆ, ಆರತಿ ಮತ್ತು ದೀಪಗಳು ಸೇರಿದಂತೆ ಒಟ್ಟು ರೂ. 87 ಸಾವಿರ ಮೌಲ್ಯದ ಹಿತ್ತಾಳೆ ಹಾಗೂ ಇತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಪ್ರಕರಣ ಕುರಿತು ​ಮೇ 20ರಂದು ಹಬ್ಬುವಾಡ ರಸ್ತೆಯ ದಾಸಮಾರುತಿ ದೇವಾಲಯದಿಂದ 50 ಕೆ.ಜಿ. ತೂಕದ ಹಿತ್ತಾಳೆ ಸಾಮಗ್ರಿಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಶಾಮಸುಂದರ ಅನಂತ ಬಸರೂರು ದೂರು ನೀಡಿದ್ದರು. ಮೇ 24ರಂದು ಅಸ್ರೋಟಿಯ ವಿಠಲ ರುಖುಮಾಯಿ ದೇವಾಲಯದ ದೀಪಗಳನ್ನು ದೋಚಲಾಗಿತ್ತು. ದೀಪಕ ಗೋಪಾಲ ಬಾವಾ ಅವರು ಚಿತ್ತಾಕುಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೇ 31ರಂದು ಚೆಂಡಿಯಾ ಗ್ರಾಮದ ಜಯಮಾರುತಿ ದೇವಸ್ಥಾನದ ಹುಂಡಿ ಒಡೆದು ರೂ. 21 ಸಾವಿರ ನಗದು ಹಾಗೂ ಎರಡು ಹಿತ್ತಾಳೆ ಗಂಟೆಗಳನ್ನು ಅಪಹರಿಸಲಾಗಿತ್ತು. ನರಸಿಂಹ ಸುಬ್ರಾಯ ಆಚಾರಿ ಈ ಬಗ್ಗೆ ದೂರು ದಾಖಲಿಸಿದ್ದರು. ಜೂನ್ 4ರಂದು ಮುಖೇರಿ ಸಾಸನವಾಡದಲ್ಲಿರುವ ರಾಮಸತಿ ದೇವಿ ದೇಗುಲಕ್ಕೆ ನುಗ್ಗಿ ಹಿತ್ತಾಳೆ ಸಾಮಗ್ರಿ ಮತ್ತು ಗಂಟೆಗಳನ್ನು ಕದ್ದಿದ್ದನು. ವಿಘ್ನೇಶ್ವರ ರತ್ನಾಕರ್ ನಾಗೇಕರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಜೂನ್ 5 ರಂದು ಸದಾಶಿವಗಡದ ಮಲ್ಲಾರವಾಡದಲ್ಲಿರುವ ಕಾಳೋಬಾ ದೇವರ ಗುಡಿಯಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಮಂಗೇಶ ದತ್ತಾ ಗಜನೀಕರ್ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆದರಿಂದ ಸರಣಿ ಕಳ್ಳತನಗಳಿಂದ ಎಚ್ಚೆತ್ತ ಪೊಲೀಸರು ಸಮಗ್ರ ಶೋಧ ನಡೆಸಿ, ಸಿಕ್ಕ ಸಣ್ಣ ಸುಳಿವಿನ ಆಧಾರದ ಮೇಲೆ ತನಿಖೆ ತೀವ್ರಗೊಳಿಸಿ ಆರೋಪಿ ವಿನಯ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನು ಮಾಡಿದ ಕೃತ್ಯಗಳನ್ನು ಒಪ್ಪಿಕೊಂಡಿದ್ದು, ಕದ್ದ ಸಾಮಗ್ರಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಗಿರೀಶ್ ವಿ., ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೆ, ಪಿಎಸ್‌ಐ ಉದ್ದಪ್ಪ ಧರೆಪ್ಪನವರ್, ಸಿಬ್ಬಂದಿ ಸೂರಜ್ ಕೋಟಾರಕರ್, ಸಚಿನ ನಾಯ್ಕ, ಹಸನ್ ಕುಟ್ಟಿ, ರಾಜೇಶ ನಾಯ್ಕ ಮುದೇವ ಸಂಗಾಪುರ, ಪ್ರಕಾಶ ದಂಡಪ್ಪನವರ್, ಪ್ರತಾಪಕುಮಾರ್ ಹಾಗೂ ತಾಂತ್ರಿಕ ವಿಭಾಗದ ಬಬನ ಕದಂ, ಉದಯ ಗುನಗಾ, ಮಹಾಲಿಂಗ ಸವಳಗಿ ಅವರನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಮಾಹಿತಿ ತಿಳಿದುಬಂದಿದೆ.