ಮಂಡ್ಯ, (ಜೂನ್ 09):ಒಂದೇ ಕುಟುಂಬದ ಮೂವರು ಅನುಮಾನಾಸ್ಪಾದವಾಗಿ ಮೃತಪಟ್ಟಿರುವ ಘಟನೆ ಮಂಡ್ಯ ನಗರದ ನೆಹರು ನಗರದಲ್ಲಿ ನಡೆದಿದೆ. ಪತ್ನಿ ಜ್ಯೋತಿ, ಪತಿ ಪ್ರಭಾಕರ್ ಹಾಗೂ ಇವರ ಪುತ್ರ ಸಂತೋಷ್ ಮೃತರು. ಕಳೆದ ರಾತ್ರಿ ಮನೆಯಲ್ಲಿ ತಾಯಿ ಜ್ಯೋತಿ, ಮಗ ಸಂತೋಷ್ ಸಾವನ್ನಪ್ಪಿದ್ದರೆ, ಇಂದು (ಜೂನ್ 09) ತಮ್ಮ ಬಟ್ಟೆ ಅಂಗಡಿಯಲ್ಲಿ ಪ್ರಭಾಕರ್ ನೇಣಿಗೆ ಶರಣಾಗಿದ್ದಾರೆ. ಮೊದಲು ಸಾವಿನ ರಹಸ್ಯ ನಿಗೂಢವಾಗಿತ್ತು. ಆದ್ರೆ, ತನಿಖೆ ವೇಳೆ ಪತ್ತೆಯಾದ ಡೆತ್ನೋಟ್ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಹೌದು…ಪ್ರಭಾಕರ್ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಸಾವಿಗೆ ನಿಜವಾದ ಕಾರಣ ಬಯಲಿಗೆ ಬಂದಿದೆ. ಪ್ರಭಾಕರ್ ಅವರೇ ಪತ್ನಿ ಜ್ಯೋತಿ ಹಾಗೂ ಮಗ ಸಂತೋಷ್ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಬಳಿಕ ತಾನೂ ಸಹ ಬಟ್ಟೆ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಪ್ರಭಾಕರ್ ಬರೆದಿರುವ ಡೆತ್ನೋಟ್ ಪತ್ತೆಯಾಗಿದ್ದು, ಡೆತ್ನೋಟ್ನಲ್ಲಿ ಪ್ರಭಾಕರ್ ಅವರು ತಮ್ಮ ಆರ್ಥಿಕ ಸಂಕಷ್ಟವನ್ನು ಉಲ್ಲೇಖಿಸಿದ್ದಾರೆ. ಬಟ್ಟೆ ವ್ಯಾಪಾರ ಕುಸಿತಗೊಂಡಿದ್ದು, ಸಾಲದ ಒತ್ತಡ ಹೆಚ್ಚಾಗಿತ್ತು. ಖಾಸಗಿ ಫೈನಾನ್ಸ್ ಸಂಸ್ಥೆಗಳ ಸಾಲದ ಒತ್ತಡ ಮತ್ತು ಕಿರುಕುಳದಿಂದ ಮಾನಸಿಕವಾಗಿ ಕುಗ್ಗಿದ್ದೆ. ಅದೇ ಕಾರಣಕ್ಕೆ ಮಗ ಮತ್ತು ಹೆಂಡತಿಯನ್ನು ಸಾಯಿಸಿರುವುದಾಗಿ ಉಲ್ಲೇಖಿಸಿದ್ದಾನೆ. ಪತ್ನಿ ಜ್ಯೋತಿ ಅವರನ್ನು ಪಂಚೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಪುತ್ರ ಸಂತೋಷ್ನನ್ನೂ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಮೃತ ಸಂತೋಷ್ ಅವರಿಗೆ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಘಟನೆ ನಡೆದ ವೇಳೆ ಸೊಸೆ ಗಾಢ ನಿದ್ರೆಯಲ್ಲಿದ್ದ ಕಾರಣ ಮನಯಲ್ಲೇ ಇದ್ದರೂ ಈ ಘಟನೆ ಆಕೆಯ ಗಮನಕ್ಕೆ ಬಂದಿಲ್ಲ.

ಬೆಳಿಗ್ಗೆ ಎದ್ದು ತಿಂಡಿ ತಯಾರಿಸಿದ ಬಳಿಕ ಅತ್ತೆಯನ್ನು ಎಬ್ಬಿಸಲು ಕೊಠಡಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮೃತ ಪ್ರಭಾಕರ್ ಸಹೋದರ ವೆಂಕಟರಾಮು ಪ್ರತಿಕ್ರಿಯಿಸಿದ್ದು, ತಮ್ಮ ನನ್ನ ಬಳಿ ಏನು ಹೇಳಿಕೊಂಡರಲಿಲ್ಲ. ಒಂದು ತಿಂಗಳ ಹಿಂದೆಯಷ್ಟೆ ಮಗನನ್ನ ಮದುವೆ ಮಾಡಿದ್ದ. ಆ ವೇಳೆ ಹಣಕಾಸು ಸಹಾಯ ಬೇಕಾ ಎಂದು ಕೇಳಿದ್ದೆ. ಹಣ ಸಹಾಯ ಏನು ಬೇಡ, ಹಣ ಅಡ್ಜೆಸ್ಟ್ ಆಗಿದೆ ಎಂದಿದ್ದ. ಆಗ ನಾನು ಬಡ್ಡಿಗೆ ಸಾಲ ಮಾಡಬೇಡಾ ಎಂದಿದ್ದೆ. ಆದ್ರೆ ಹಣ ಬೇಕಿದ್ರೆ ಕೇಳ್ತೀನಿ ಎಂದ್ದಿದ್ದ. ಸಂತೋಷ್ ಕೂಡ ಅಪ್ಪನೊಂದಿಗೆ ಅಂಗಡಿ ನೋಡಿಕೊಳ್ತಿದ್ದ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಂಡ್ಯ ಜಿಲ್ಲಾ ಪೊಲೀಸ್ ಎಸ್ಪಿ ಶೋಭಾರಾಣಿ, ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿರುವ ಅಂಶಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.














