ಶಿವಮೊಗ್ಗ: ಮೂವರು ಪುರುಷರು ಮಹಿಳೆಯರಂತೆ ಬುರ್ಕಾ ಹಾಕಿಕೊಂಡು ಬಂದು ಮಹಿಳೆಯ ಕೊಲೆಗೆ ಯತ್ನಿಸಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಜೂನ್ 10ರ ಸಂಜೆ ಶಿವಮೊಗ್ಗ ಕೆ.ಆರ್.ಪುರಂ ರಸ್ತೆಯಲ್ಲಿ ಮೂವರು ಬುರ್ಕಾ ಧರಿಸಿಕೊಂಡು ಬಂದು ತಬಸುಮ್ ಎಂಬ ಮಹಿಳೆಯ ಮನೆಗೆ ನುಗ್ಗಿ ಕೊಲೆ ಮಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಈ ವೇಳೆ ಮನೆಯಲ್ಲಿದ್ದ ತಬಸುಮ್ ಹಾಗೂ ಅವರ ತಾಯಿ ಜೋರಾಗಿ ಕೂಗಿಕೊಂಡ ಹಿನ್ನೆಲೆ ಮೂವರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಆಗ ಅಕ್ಕಪಕ್ಕದ ಮನೆಯವರು ಬಂದು ನೋಡಿದ್ದು, ಬುರ್ಕಾದಲ್ಲಿದ್ದವರು ಮಕ್ಕಳ ಕಳ್ಳರೆಂದು ಭಾವಿಸಿ ಚೆನ್ನಾಗಿ ಥಳಿಸಿದ್ದಾರೆ ಎನ್ನಲಾಗುತ್ತಿದೆ.

ಹಾಗೂ ನಂತರ ವಿಚಾರಿಸಿದಾಗ ಇವರು ತಬುಸುಮ್ ಅವರನ್ನು ಕೊಲ್ಲಲು ಬಂದಿದ್ದರು ಎಂಬ ಅಂಶ ಗೊತ್ತಾಗಿದೆ. ನಂತರ ಸ್ಥಳಕ್ಕೆ ಪೊಲೀಸರು ಬಂದು ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಗೆ ಯತ್ನಿಸಿದವರು ತಬುಸುಮ್ ಕಡೆಯವರು ಎಂದು ತಿಳಿದು ಬಂದಿದೆ. ಅಕ್ಕಪಕ್ಕದವರು ಹೊಡೆದ ಸಮಯದಲ್ಲಿ ನಾವು ಮಕ್ಕಳ ಕಳ್ಳರಲ್ಲ. ಸಾತು ಅಣ್ಣ ಅವರ ಹೆಂಡತಿ ತಬಸುಮ್ ಅವರನ್ನು ಕೊಲೆ ಮಾಡಲು ಹೇಳಿ ಕಳುಹಿಸಿದ್ದರಿಂದ ನಾವು ಯಾರಿಗೂ ಗೊತ್ತಾಗದಂತೆ ಬುರ್ಕಾ ಹಾಕಿಕೊಂಡು ಬಂದು ಅವರ ಮನೆಗೆ ಹೋಗಿ ತಬಸುಮ್ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ತಬಸುಮ್ ಅವರ ಪತಿ ಮೊಹಮ್ಮದ್ ಸಾದಿಕ್ ವಿರುದ್ದ ಅನೇಕ ಪ್ರಕರಣಗಳಿದ್ದು, ಆತ ಹಾಲಿ ಶಿವಮೊಗ್ಗದ ಸೆಂಟ್ರಲ್ ಜೈಲ್ ನಲ್ಲಿದ್ದಾನೆ. ಈತ ಪತ್ನಿಗೆ ಹಣ ನೀಡುವಂತೆ ದಂಬಾಲು ಬಿದ್ದಿದ್ದಾನೆ. ಇದಕ್ಕೆ ತಬಸುಮ್ ಒಪ್ಪದ ಕಾರಣಕ್ಕೆ ಬೆದರಿಕೆ ಹಾಕುತ್ತಿದ್ದನು.

ಆದರಿಂದ ಈತನೇ ತನ್ನ ಹೆಂಡತಿಯನ್ನು ಸಾಯಿಸಲು ತಿಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ದರ್ಶನ್, ಮಹೇಶ್ ಹಾಗೂ ಅಸ್ಲಂ ಅವರು ತಬಸುಮ್ ಅವರನ್ನು ಕೊಲ್ಲಲು ಬಂದಿದ್ದ ಇವರ ವಿರುದ್ದ ಸೇರಿದಂತೆ ಮುನ್ನಾ ಹಾಗೂ ಮೊಹಮ್ಮದ್ ಸಾದಿಕ್ ವಿರುದ್ದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಗಂಡ, ನಾನು ಅವರಿಗೆ ಕೋರ್ಟು – ಕಚೇರಿ ಕೇಸುಗಳಿಗೆ ಹಣ ಕೊಡಲಿಲ್ಲ ಎಂದು ನನಗೆ ಹಿಂದಿನಿಂದಲೂ ಕೊಲೆ ಬೆದರಿಕೆ ಹಾಕುತ್ತಿದ್ದರು. ಈಗ ಪ್ರಕರಣದ ಆರೋಪಿಗಳಿಗೆ ಕುಮ್ಮಕ್ಕು ನೀಡಿ ನನ್ನನ್ನು ಕೊಲೆ ಮಾಡಲು ಕಳುಹಿಸಿದ್ದು, ಅವರ ಕುಮ್ಮಕ್ಕಿನಿಂದಲೇ ಈ ಹುಡುಗರು ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಈ ಆರೋಪಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ತಬಸುಮ್ ದೂರಿನಲ್ಲಿ ತಿಳಿಸಿದ್ದಾರೆ ಎಂಬುದ್ದಾಗಿದೆ.















