ಮನೆ ಕ್ರೀಡೆ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿ ನಾಳೆಯಿಂದ ಆರಂಭ

ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿ ನಾಳೆಯಿಂದ ಆರಂಭ

0

ಲಂಡನ್‌ (London): ಟಿ20 ಸರಣಿ ಗೆದ್ದಿರುವ ಭಾರತ ತಂಡ ಅದೇ ಆತ್ಮವಿಶ್ವಾಸದಲ್ಲಿ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಮಂಗಳವಾರ ಇಂಗ್ಲೆಂಡ್‌ ವಿರುದ್ಧ ಸೆಣಸಾಡಲಿದೆ.

ಏಕದಿನ ಮಾದರಿಯಲ್ಲಿ ಮಾತ್ರ ಆಡುವ ಶಿಖರ್‌ ಧವನ್‌ ಸೇರಿದಂತೆ ಕೆಲವು ಆಟಗಾರರಿಗೆ ಈ ಸರಣಿ ಸವಾಲಾಗಿ ಪರಿಣಮಿಸಿದೆ. ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಲು ಉತ್ತಮ ಆಟವಾಡುವುದು ಅನಿವಾರ್ಯ.

ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡ ರೋಹಿತ್‌ ಶರ್ಮ ಬಳಗ ಟಿ20 ಸರಣಿಯನ್ನು 2–1 ರಲ್ಲಿ ಗೆದ್ದಿತ್ತು. ಟಿ20 ವಿಶ್ವಕಪ್‌ಗೆ ಮುನ್ನ ಭಾರತ ಆಡಲಿರುವ ಕೊನೆಯ ಏಕದಿನ ಸರಣಿ ಇದಾಗಿದೆ. ಮೂರು ಪಂದ್ಯಗಳ ಸರಣಿ ನಮಗೆ ಮಹತ್ವದ್ದಾಗಿದೆ ಎಂದು ನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ.

ಪ್ರತಿ ಪಂದ್ಯವೂ ನಮಗೆ ಮುಖ್ಯವಾದುದು. ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳಿರುವಾಗ ಏಕದಿನ ಪಂದ್ಯಗಳಲ್ಲಿ ಆಡುವುದು ಮುಖ್ಯವಲ್ಲ ಎಂಬ ಭಾವನೆ ಸರಿಯಲ್ಲ. ಏಕದಿನ ಮತ್ತು ಟಿ20 ಪಂದ್ಯಗಳಿಗೆ ತಂಡದಲ್ಲಿ ಬದಲಾವಣೆ ಮಾಡುತ್ತಿರುತ್ತೇವೆ. ಆದರೆ ನಮ್ಮ ಅಂತಿಮ ಗುರಿ ಗೆಲುವು ಪಡೆಯುವುದೇ ಆಗಿದೆ ಎಂದು ನುಡಿದಿದ್ದಾರೆ.

ಆತ್ಮವಿಶ್ವಾಸದಲ್ಲಿ ಇಂಗ್ಲೆಂಡ್‌:

ಎಯೊನ್‌ ಮಾರ್ಗನ್‌ ಅವರಿಂದ ಇಂಗ್ಲೆಂಡ್‌ ತಂಡದ ನಾಯಕತ್ವದ ಜವಾಬ್ದಾರಿ ಪಡೆದ ಬಳಿಕ ಜೋಸ್‌ ಬಟ್ಲರ್‌ಗೆ ಮೊದಲ ಏಕದಿನ ಸರಣಿ ಇದಾಗಿದೆ. ಆದ್ದರಿಂದ ಯಶಸ್ಸಿನ ಆರಂಭ ಪಡೆಯುವ ಉದ್ದೇಶ ಅವರದ್ದು.

ಬೆನ್‌ ಸ್ಟೋಕ್ಸ್‌, ಜೋ ರೂಟ್‌ ಮತ್ತು ಜಾನಿ ಬೆಸ್ಟೋ ವಾಪಸಾಗಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಬರ್ಮಿಂಗ್‌ಹ್ಯಾಂ ಟೆಸ್ಟ್‌ ಗೆಲುವಿನಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಸ್ಟೋಕ್ಸ್‌ ಮತ್ತು ಬೆಸ್ಟೋ ಅವರಿಗೆ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿತ್ತು.

ತಂಡಗಳು:

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್‌ ಧವನ್, ಇಶಾನ್ ಕಿಶನ್, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್‌ ಅಯ್ಯರ್, ರಿಷಭ್‌ ಪಂತ್ (ವಿಕೆಟ್‌ ಕೀಪರ್), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಶಾರ್ದೂಲ್‌ ಠಾಕೂರ್, ಯಜುವೇಂದ್ರ ಚಾಹಲ್, ಅಕ್ಷರ್‌ ಪಟೇಲ್, ಜಸ್‌ಪ್ರೀತ್‌ ಬೂಮ್ರಾ, ಪ್ರಸಿದ್ಧ ಕೃಷ್ಣ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್, ಅರ್ಷದೀಪ್‌ ಸಿಂಗ್‌.

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಮೋಯಿನ್ ಅಲಿ, ಜಾನಿ ಬೆಸ್ಟೋ, ಹ್ಯಾರಿ ಬ್ರೂಕ್, ಬ್ರೈಡನ್‌ ಕಾರ್ಸ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರೆಗ್‌ ಅವರ್ಟನ್, ಮ್ಯಾಥ್ಯೂ ಪಾರ್ಕಿನ್ಸನ್, ಜೋ ರೂಟ್, ಜೇಸನ್‌ ರಾಯ್, ಫಿಲ್‌ ಸಾಲ್ಟ್‌, ಬೆನ್‌ ಸ್ಟೋಕ್ಸ್, ರೀಸ್‌ ಟಾಪ್ಲಿ, ಡೇವಿಡ್‌ ವಿಲಿ.