ಮನೆ ಕಾನೂನು ಹೈಕೋರ್ಟ್‌ ನ್ಯಾಯಾಧೀಶರಿಗೆ ವರ್ಗಾವಣೆ ಬೆದರಿಕೆ: ಸುಪ್ರೀಂಕೋರ್ಟ್‌ನಲ್ಲಿ ಇಂದು ವಿಚಾರಣೆ

ಹೈಕೋರ್ಟ್‌ ನ್ಯಾಯಾಧೀಶರಿಗೆ ವರ್ಗಾವಣೆ ಬೆದರಿಕೆ: ಸುಪ್ರೀಂಕೋರ್ಟ್‌ನಲ್ಲಿ ಇಂದು ವಿಚಾರಣೆ

0

ಬೆಂಗಳೂರು(Bengaluru): ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿಗೆ ತೃತೀಯ ವ್ಯಕ್ತಿಯ ಮೂಲಕ ವರ್ಗಾವಣೆ ಬೆದರಿಕೆ ಹಾಕಿರುವ ಸಂಗತಿ ಹಾಗು ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರ ವಿರುದ್ಧ ರಾಜ್ಯ ಹೈಕೋರ್ಟ್​ನಲ್ಲಿ ಮಾಡಲಾದ ಟೀಕೆಗಳ ಪ್ರಕರಣ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಶೇಷ ಮನವಿಗಳನ್ನು ಸಲ್ಲಿಸಲಾಗಿದ್ದು, ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಭ್ರಷ್ಟಾಚಾರ ಪ್ರಕರಣವೊಂದರ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಎಸಿಬಿ ಮುಖ್ಯಸ್ಥರ ವಿರುದ್ದ ಕಟು ಟೀಕೆಗಳನ್ನು ಮಾಡಿದ್ದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿಗೆ ವರ್ಗಾವಣೆ ಬೆದರಿಕೆ ಬಂದಿದೆ ಎಂಬ ನ್ಯಾಯಮೂರ್ತಿಗಳ ಹೇಳಿಕೆ ಆಧರಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಪ್ರವೇಶಿಸಿದೆ.

ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನಿನ್ನೆ ಈ ಬಗ್ಗೆ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮುಖ್ಯ ನ್ಯಾಯಮೂರ್ತಿಗಳಲ್ಲಿ ಮನವಿ ಮಾಡಿದ್ದರು. ಈ ಹಿಂದೆ ಈ ಪ್ರಕರಣದಲ್ಲಿ ಹೈಕೋರ್ಟ್​ನ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳು ಸರ್ಕಾರಕ್ಕೆ ಹಲವಾರು ನಿರ್ದೇಶನಗಳನ್ನು ಮತ್ತು ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಕೋರಿದಾಗ ಮುಖ್ಯನ್ಯಾಯಮೂರ್ತಿಗಳು ಮನವಿ ಬಗ್ಗೆ ಮಂಗಳವಾರ ಸೂಕ್ತ ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿದ್ದರು.

ಇದೇ ಸಂದರ್ಭದಲ್ಲಿ ಎಸಿಬಿ ಮುಖ್ಯಸ್ಥ ಸೀಮಂತ ಕುಮಾರ ಸಿಂಗ್ ಪರವಾಗಿ ಹಿರಿಯ ವಕೀಲ ಅಮಿತ್ ಕುಮಾರ್ ಅವರು ಅರ್ಜಿ ಸಲ್ಲಿಸಿ ಹೈಕೋರ್ಟ್ ನ್ಯಾ.ಹೆಚ್.ಪಿ.ಸಂದೇಶ್ ಅವರು ತಮ್ಮ ಕಕ್ಷಿದಾರರ ವಿರುದ್ದ ಮಾಡಿರುವ ಟೀಕೆಗಳನ್ನು ರದ್ದುಪಡಿಸಬೇಕೆಂದು ಮನವಿ ಮಾಡಿದ್ದರು.

ಹಲವು ವರ್ಷಗಳ ಉತ್ತಮ ಅನುಭವ ಹೊಂದಿರುವ ಎಸಿಬಿ ಮುಖ್ಯಸ್ಥರ ವಿರುದ್ದ ಹೈಕೋರ್ಟ್ ನ್ಯಾಯಮೂರ್ತಿ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ಇದು ಸರಿಯಲ್ಲವೆಂದು ಕೋರ್ಟ್ ಗಮನಕ್ಕೆ ತಂದಿದ್ದರು.

ಎಸಿಬಿ ಮುಖ್ಯಸ್ಥರ ಪರವಾಗಿ ಸಲ್ಲಿಸಿದ ಅರ್ಜಿಯನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿಗಳು ನೀವು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಬೆದರಿಕೆ ಹಾಕಿದ್ದೀರಾ? ನೀವು ಬಹಳ ಪ್ರಭಾವಿ ವ್ಯಕ್ತಿಯಂತೆ ಎಂದು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ವರ್ಗಾವಣೆ ಬೆದರಿಕೆ ಹಾಕಿಲ್ಲ, ಇದು ಮಾಧ್ಯಮಗಳ ಸೃಷ್ಟಿಯಾಗಿದೆ. ಇದರಿಂದ ತಮ್ಮ ಕಕ್ಷಿದಾರರ ಘನತೆಗೆ ಕುಂದು ಉಂಟಾಗಿದೆ ಎಂದು ಹೇಳಿದರು.

ಭ್ರಷ್ಟಾಚಾರ ಪ್ರಕರಣವೊಂದರ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಎಸಿಬಿಯ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿದ ತಮಗೆ ತೃತೀಯ ವ್ಯಕ್ತಿಯ ಮೂಲಕ ವರ್ಗಾವಣೆ ಬೆದರಿಕೆ ವ್ಯಕ್ತವಾಗಿದೆ ಎಂದು ನ್ಯಾಯಾಲಯ ಕಲಾಪದಲ್ಲಿ ಮೌಖಿಕವಾಗಿ ನೀಡಿದ ಹೇಳಿಕೆಗಳನ್ನು ಹೈಕೋರ್ಟ್ ನ್ಯಾ.ಹೆಚ್.ಪಿ.ಸಂದೇಶ್ ಅವರು ರೆಕಾರ್ಡ್​ನಲ್ಲಿ ದಾಖಲಿಸಿದ್ದಾರೆ.

ಈ ಹಿಂದೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಸಿಬ್ಬಂದಿಯ ಭ್ರಷ್ಟಾಚಾರ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಿಚಾರಣೆಯ ವೇಳೆ ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ಪರ ಹಾಜರಾದ ಹಿರಿಯ ವಕೀಲರಾದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರು ತಮ್ಮ ಕಕ್ಷಿದಾರರ ವಿರುದ್ದ ಮುಕ್ತ ಕಲಾಪದಲ್ಲಿ ಮಾಡಿದ ಮೌಖಿಕ ಟೀಕೆ-ಟಿಪ್ಪಣಿಗಳ ವಿರುದ್ದ ಸುಪ್ರೀಂಕೋರ್ಟ್​ಗೆ ವಿಶೇಷ ಮೇಲ್ಮನವಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆದು ನ್ಯಾಯಾಲಯದ ಆದೇಶ ಬರುವ ತನಕ ಈ ಪ್ರಕರಣದ ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿದ್ದರು.