ಮನೆ ಪ್ರಕೃತಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕೀಯ ಬೇಡ: ಸಚಿವ ಬಿ.ಸಿ.ನಾಗೇಶ್

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕೀಯ ಬೇಡ: ಸಚಿವ ಬಿ.ಸಿ.ನಾಗೇಶ್

0

ಮಡಿಕೇರಿ(Madikeri): ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡಬಾರದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀರ್ಘ ಕಾಲ‌ ಅಧಿಕಾರದಲ್ಲಿದ್ದ ಕಾಂಗ್ರೆಸ್ ಗೆ ಪ್ರತಿಪಕ್ಷವಾಗಿ ಹೇಗೆ ವರ್ತಿಸಬೇಕು ಎನ್ನುವುದೇ ಗೊತ್ತಿಲ್ಲ  ಎಂದು ಹೇಳಿದರು.

10 ದಿನಗಳ ಹಿಂದೆಯಷ್ಟೆ ಬಂದು ಮಳೆಗೆ ತೆಗೆದು ಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ್ದೆ. ಕಂದಾಯ ಸಚಿವ ಆರ್.ಅಶೋಕ್ ಸಹ ಈಚೆಗಷ್ಟೆ ಬಂದು ಪರಿಶೀಲನೆ ನಡೆಸಿದ್ದರು. ಸರ್ಕಾರ ಕೊಡಗನ್ನು‌‌‌ ಮರೆತಿದೆ ಎನ್ನುವ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರ  ಎಂದು ಪ್ರತಿಕ್ರಿಯಿಸಿದರು.

ಗ್ರಾಮ ಪಂಚಾಯತಿಯಿಂದ ಜಿಲ್ಲಾ ಪಂಚಾಯಿತಿವರೆಗೆ ಕಾರ್ಯಪಡೆ ರಚಿಸಲಾಗಿದೆ. 2018 ರ ದುರಂತದ ಮಾದರಿಯಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲಾಗಿದೆ. ಮನೆ ಹಾನಿಯಾದವರಿಗೆ ಪರಿಹಾರ ವಿತರಿಸಲಾಗಿದೆ ಎಂದರು.

ಚೆಕ್ ಡ್ಯಾಂ ನಲ್ಲಿ ಮರಗಳು ಸಿಲುಕಿ ಮನೆಗಳಿಗೆ ನೀರು ನುಗ್ಗಿದೆ. ಕೂಡಲೆ ಮರಗಳನ್ನು ತೆರವುಗೊಳಿಸಲಾಗಿದೆ‌. 55 ಮನೆಗಳು ಭಾಗಶಃ , 2 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. 3 ಸೇತುವೆ 1 ಶಾಲೆ, 1 ದೇಗುಲಕ್ಕೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

2018 ರ ಕೆಲವು ಸಂತ್ರಸ್ತರಿಗೆ ಇನ್ನೂ ಮನೆ ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಇನ್ಫೋಸಿಸ್ ‌ಮನೆಗಳು ಪೂರ್ಣಗೊಂಡಿಲ್ಲ. ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಆಗಬೇಕಿದೆ ಎಂದರು.

ಕೆಲವರಲ್ಲಿ ಒತ್ತಡ ಹಾಕಿ‌ ಕೆಲಸ ಮಾಡಿಸಿಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಕೆಲಸ ಆಗಲಿಲ್ಲ ಎಂದಾಗ ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುತ್ತಾರೆ. ಹಾಗಾಗಿ ಕೆಲವರು ನನ್ನ ವಿರುದ್ಧ ಪ್ರಧಾನಿಗೆ ಪತ್ರ ಬರೆದಿರಬಹುದು ಎಂದರು.