ಮೈಸೂರು (Mysuru): ವಿಧಾನಸಭೆ ಚುನಾವಣೆಯು ಯಾವಾಗ ನಡೆದರೂ ಎದುರಿಸಲು ನಾವು ಸಿದ್ಧವಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಜನರಿಗೆ ಆಕ್ರೋಶವಿದೆ. ಈ ಆಕ್ರೋಶ ಹೆಚ್ಚಾಗುವ ಮುನ್ನ ಚುನಾವಣೆಗೆ ಹೋಗುವ ಯೋಜನೆಯಲ್ಲಿ ಬಿಜೆಪಿಯವರಿದ್ದಂತಿದೆ. ನಾವೂ ತಯಾರಿದ್ದೇವೆ ಎಂದರು.
ಅವಧಿಗೂ ಮುನ್ನವೇ ಚುನಾವಣೆ ಸಾಧ್ಯತೆ ಇದೆ ಎಂಬ ವಂದಂತಿ ಇದ್ದು, ಬಿಜೆಪಿಯವರು ಸಿದ್ಧತಾ ಕಾರ್ಯಾಗಾರ ನಡೆಸಿದ್ದಾರೆ. ಅವರಿಗೆ ಸೋಲುವ ಭಯವಿದೆ ಎಂದು ವ್ಯಂಗ್ಯವಾಡಿದ ಅವರು, ಅಲ್ಪಸಂಖ್ಯಾತರು, ಸಾಮಾನ್ಯ ಜನರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವರ ನೋವನ್ನು ಗಮನಿಸಿ, ಶಾಂತಿಯ ತೋಟಕ್ಕೆ ಧಕ್ಕೆಯಾಗದಂತೆ ಸರ್ಕಾರ ಕೆಲಸ ಮಾಡಬೇಕು ಎಂದು ಹೇಳಿದರು.
ಚುನಾವಣೆ ಸಂದರ್ಭ ನೀಡಿದ್ದ ಭರವಸೆಗಳನ್ನು ಬಿಜೆಪಿಯವರು ಈಡೇರಿಸಿಲ್ಲ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿದ್ದೇವೆ. ಇದು ಬಿಜೆಪಿಯ ಅಸೂಯೆಗೆ ಕಾರಣವಾಗಿದೆ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅವರ ಅಸೂಯೆಗೆ ಮುದ್ದು ಕೊಡುತ್ತೇವೆ ಎಂದರು. ಇದಕ್ಕೂ ಮುನ್ನ, ಜಲದರ್ಶಿನಿ ಅತಿಥಿ ಗೃಹದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳೊಂದಿಗೆ ಶಿವಕುಮಾರ್ ಚರ್ಚಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.