ಮನೆ ರಾಜ್ಯ ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ: ಮೈಸೂರು ದಸರಾ ಬ್ರ್ಯಾಂಡ್ ಸೃಜನೆ; ಸಿಎಂ ಬೊಮ್ಮಾಯಿ

ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ: ಮೈಸೂರು ದಸರಾ ಬ್ರ್ಯಾಂಡ್ ಸೃಜನೆ; ಸಿಎಂ ಬೊಮ್ಮಾಯಿ

0

ಬೆಂಗಳೂರು (Bengaluru): ಮೈಸೂರು ದಸರಾ ಕುರಿತು ಬ್ರ್ಯಾಂಡ್ ಸೃಜಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ವಿಧಾ‌ನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ- 2022 ರ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಎರಡು ವರ್ಷಗಳಿಂದ ಸಾಂಪ್ರದಾಯಿಕ ಸರಳ ದಸರಾ ಆಚರಿಸಲಾಗಿದೆ. ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸಬೇಕೆಂಬ ಎಲ್ಲರ ಅಭಿಪ್ರಾಯವನ್ನು ಸರ್ಕಾರ ಮನ್ನಿಸಿದೆ.
ಸೆಪ್ಟೆಂಬರ್ 26, 2022 ರಂದು ನವರಾತ್ರಿ ನವರಾತ್ರಿ ದಸರಾ ಪ್ರಾರಂಭ, ಅಕ್ಟೋಬರ್ 5 ವಿಜಯದಶಮಿಯಂದು ನಂದಿಧ್ವಜ ಪೂಜೆ, ಪುಷ್ಪಾರ್ಚನೆ, 7 ಮತ್ತು 8 ರಂದು ವೀರಹೊಸಹಳ್ಳಯಿಂದ ಗಜಪಯಣ ಪ್ರಾರಂಭ, ಗಜಪಡೆಯ ನಿರ್ಗಮನದ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.
ಸರ್ಕಾರದ ಎಲ್ಲಾ ಜಾಹೀರಾತು, ಪ್ರಕಟಣೆಗಳು, ವೆಬ್ ಸೈಟ್, ಸಾಮಾಜಿಕ ಮಾಧ್ಯಮಗಳಲ್ಲಿ ಮೈಸೂರು ದಸರಾ ಲಾಂಛನವನ್ನು ಪ್ರಕಟಿಸಬೇಕು. ಮುಂಬೈ, ದೆಹಲಿ ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮೈಸೂರು ದಸರಾ ಕುರಿತು ಪ್ರಚಾರ ಮಾಡಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಒಂದು ವಾರದೊಳಗೆ ಮೈಸೂರು ಟೂರಿಸಂ ಸರ್ಕಿಟ್ ಕುರಿತು ಆದೇಶ:
ಒಂದು ವಾರದೊಳಗೆ ಮೈಸೂರು ಟೂರಿಸಂ ಸರ್ಕಿಟ್ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು. ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ವಲಯದ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು. ಸರ್ಕಿಟ್ ನಲ್ಲಿ ಬೇಲೂರು, ಹಳೇಬೀಡು ಮುಂತಾದ ಪ್ರದೇಶಗಳಿಗೆ ಪ್ರವಾಸದ ಯೋಜನೆ, ಪ್ರಯಾಣ ಹಾಗೂ ವಸತಿ ಎಲ್ಲವೂ ಒಂದೇ ಟಿಕೆಟ್‍ನಲ್ಲಿ ಸಾಧ್ಯವಾಗಲಿದೆ. ಇದಕ್ಕೆ ವೆಬ್‍ಸೈಟ್ ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು ದಸರಾಕ್ಕೆ ಇದು ಪೂರಕವಾಗಲಿದೆ ಎಂದರು.
ಪಾರಂಪರಿಕ ಪದ್ದತಿಗಳ ಪುನರಾರಂಭ:
ನಾಡಹಬ್ಬಕ್ಕೆ ಸಂಬಂಧಿಸಿದಂತೆ ಹಿಂದೆ ಅನುಸರಿಸುತ್ತಿದ್ದ ಗಜಪಯಣ ಸೇರಿದಂತೆ ಪಾರಂಪರಿಕ ಪದ್ದತಿಗಳನ್ನು ಪುನಃ ಪ್ರಾರಂಭಿಸಲಾಗುವುದು ಎಂದರು. ಇದರಿಂದ ಸ್ಥಳೀಯ ಹಾಗೂ ಗ್ರಾಮೀಣ ಭಾಗದ ಜನರು ತೊಡಗಿಕೊಂಡಂತಾಗುತ್ತದೆ ಎಂದು ತಿಳಿಸಿದರು.
ದಸರಾ ಹಬ್ಬಕ್ಕೆ 15 ದಿನಗಳ ಮುನ್ನವೇ ವಸ್ತು ಪ್ರದರ್ಶನ ಉದ್ಘಾಟಿಸಲು ಸೂಚಿಸಲಾಗಿದೆ. ಶ್ರೀರಂಗಪಟ್ಟಣ ಹಾಗೂ ಚಾಮರಾಜನಗರ ದಸರಾಕ್ಕೆ ತಲಾ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ ಎಂದರು.
ಅರಮನೆ ಆಡಳಿತ ಮಂಡಳಿಯು ಅರಮನೆ ವ್ಯಾಪ್ತಿಯೊಳಗಿನ ವೆಚ್ಚವನ್ನು ಭರಿಸಲಿದೆ. ಮುಡಾ ವತಿಯಿಂದ 10 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ. ಈ ಬಾರಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಅನುದಾನ ಬಳಕೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಉಳಿದ ಮೊತ್ತವನ್ನು ಸರ್ಕಾರ ಭರಿಸಲಿದೆ ಎಂದರು.
ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವುದರ ಜೊತೆ ಪ್ರತಿನಿತ್ಯ ಒಬ್ಬ ರಾಷ್ಟ್ರಮಟ್ಟದಲ್ಲಿ ಖ್ಯಾತಿಯಳ್ಳ ಕಲಾವಿದರಿಂದ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ದಸರಾ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ಮೈಸೂರು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ದಸರಾ ನೆಪದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿವೆ ಎಂದು ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅರಮನೆ ಆವರಣದೊಳಗೆ ನಡೆಯುವ ಕಾರ್ಯಕ್ರಮಗಳ ವೆಚ್ಚವನ್ನು ಅರಮನೆ ಆಡಳಿತ ಮಂಡಳಿ ಭರಿಸುವಂತೆ, ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.
ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎಂಬುದರ ಕುರಿತು ಎಲ್ಲರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಮೈಸೂರು ಜಿಲ್ಲೆಯ ಸಂಸದರು, ಎಲ್ಲಾ ಶಾಸಕರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.