ಅಮೃತಸರ್(ಪಂಜಾಬ್): ಗಾಯಕ, ರಾಜಕೀಯ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳು ಮತ್ತು ಪಂಜಾಬ್ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಅಮೃತಸರ್ದ ಚೋಚಾ ಭಕ್ನಾ ಗ್ರಾಮದಲ್ಲಿ ಎನ್ಕೌಂಟರ್ ನಡೆಯುತ್ತಿದ್ದು, ಮನೆಯಿಂದ ಜನರು ಹೊರಬಾರದಂತೆ ಪೊಲೀಸರು ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಮಾಹಿತಿ ಪ್ರಕಾರ ಓರ್ವ ಆರೋಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಮೂವರು ಪೊಲೀಸರಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ. ಇದೇ ವೇಳೆ ಘಟನೆಯಲ್ಲಿ ಒಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೇ. 19ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೊಸೆವಾಲಾ ಹತ್ಯೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಗ್ಯಾಂಗ್ಸ್ಟರ್ಗಳಾದ ಜಗರೂಪ್ ಸಿಂಗ್, ಮನಪ್ರೀತ್ ಸಿಂಗ್ ಸೇರಿದಂತೆ ಕೆಲವರ ಬಂಧನ ಮಾಡಿದ್ದಾರೆ.
ಉಳಿದ ಆರೋಪಿಗಳಿಗೋಸ್ಕರ ಪೊಲೀಸರು ಶೋಧಕಾರ್ಯ ನಡೆಸಿದ್ದರು. ಇದೀಗ ಮೂವರು ಆರೋಪಿಗಳು ಚೀಚಾ ಭಕ್ನಾ ಗ್ರಾಮದಲ್ಲಿ ಪತ್ತೆಯಾಗಿದ್ದು, ಅವರೊಂದಿಗೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಎಸ್ಹೆಚ್ಒ ಸುಖ್ಬೀರ್ ಸಿಂಗ್ ಮಾತನಾಡಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಅಡಗಿ ಕುಳಿತಿರುವ ವ್ಯಕ್ತಿಗಳು ಉಗ್ರರೋ ಅಥವಾ ಗ್ಯಾಂಗಸ್ಟರ್ಗಳು ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ.