ಮನೆ ರಾಜ್ಯ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ರೈತ ವಿದ್ಯಾನಿಧಿ ಯೋಜನೆ: ಬಸವರಾಜ ಬೊಮ್ಮಾಯಿ

ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ರೈತ ವಿದ್ಯಾನಿಧಿ ಯೋಜನೆ: ಬಸವರಾಜ ಬೊಮ್ಮಾಯಿ

0

ಮಂಡ್ಯ (Mandya): ರೈತರ ಮಕ್ಕಳು ವಿದ್ಯಾವಂತರಾಗಿ ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಕೆ.ಆರ್.ಪೇಟೆ ಟೌನ್ ಪುರಸಭಾ ಕಚೇರಿ ಹತ್ತಿರ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಸರ್ಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕೆ.ಆರ್ ಪೇಟೆ ತಾಲ್ಲೂಕಿನ ಸಂತೆಬಾಚೆನಹಳ್ಳಿ ಹೋಬಳಿಯಲ್ಲಿ 212 ಕೋಟಿ ರೂ, ಭೂಕನಕೆರೆ 265 ಕೋಟಿ ಸೇರಿದಂತೆ 2 ಏತ ನೀರಾವರಿ ಯೋಜನೆಗಳನ್ನು ಮಂಜೂರಾತಿ ಮಾಡಲಾಗಿದೆ. 11 ಕೆರೆ ತುಂಬಿಸಲು 25 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಜಲ್ ಜೀವನ ಮಿಷನ್ ಯೋಜನಯಡಿ ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಪ್ರಧಾನಿಗಳ ಕನಸನ್ನು ನನಸು ಮಾಡಲು ಮೂರು ತಾಲ್ಲೂಕುಗಳಿಗೆ ಈ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ ಅದರಲ್ಲಿ 420 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಕೆ.ಆರ್. ಪೇಟೆ ತಾಲ್ಲೂಕಿಗೆ ನೀಡಲಾಗುವುದು ಎಂದರು.
ಮಂಡ್ಯ ಜಿಲ್ಲೆಯ ಜೀವನದಿಯಾಗಿರುವ ಕಾವೇರಿ, ಹೇಮಾವತಿ ಇವುಗಳ ಸಮಗ್ರ ಅಭಿವೃದ್ಧಿಗೆ ಬದ್ದರಾಗಿರುತ್ತೆವೆ. ಹೇಮಾವತಿ ಮತ್ತು ಎಡೆದಂಡೆ ನಾಲೆಯ ಕೆಲಸಕ್ಕೆ ಬೇಕಾದ ಅನುದಾನವನ್ನು ನೀಡಿ ಕೆಲಸವನ್ನು ಆದಷ್ಟು ಬೇಗ ಮುಗಿಸುತ್ತೇವೆ ಎಂದು ಹೇಳಿದರು.
ರೈತರ ಶ್ರಮಕ್ಕೆ ಗೌರವ ಹಾಗೂ ಬೆವರಿಗೆ ಬೆಲೆ ನೀಡಬೇಕು ಎಂಬ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಮೈಶುಗರ್ ಆರಂಭಿಸಲು ಸಭೆ ಮಾಡಿ ತೀರ್ಮಾನಿಸಿ ಅನುದಾನವನ್ನು ಬಿಡುಗಡೆ ಮಾಡಿ ಆಗಸ್ಟ್ ತಿಂಗಳಲ್ಲಿ ಕಾರ್ಖಾನೆ ಆರಂಭಿಸಿ ರೈತರ ಕಬ್ಬನ್ನು ಮೈ ಶುಗರ್ ನಲ್ಲಿ ಅರೆಸುತ್ತೇವೆ. ಕಾರ್ಮಿಕರ, ರೈತರ, ಮಹಿಳೆಯರ, ಯುವಕರ, ದೀನ ದಲಿತರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಕಂದಾಯ ಇಲಾಖೆಯಿಂದ ಪೌತಿ ಖಾತೆ ಯೋಜನೆ, ಅಂಗವಿಕಲ ವೇತನ, ಬಸವ ವಸತಿ ಯೋಜನೆಯಡಿ ಸಹಾಯಧನ, ಆರೋಗ್ಯ ಇಲಾಖೆಯಿಂದ ಕನ್ಬಡಕ ವಿತರಣೆ, ಆಯುಷ್ಮಾನ್ ಆರೋಗ್ಯ ಕಾರ್ಡ ವಿತರಣೆ, ಮಹಿಳಾ ಇಲಾಖೆಯಿಂದ ಮಹಿಳಾ ಸ್ವಸಹಾಯ ಸಂಘದಿಂದ ಸಣ್ಣ ಉದ್ದಿಮೆ ಪ್ರಾರಂಭಿಸಲು ಬೀಜ ಧನ ಸೇರಿದಂತೆ ವಿವಿಧ ಸವಲತ್ತುಗಳನ್ನು ಮುಖ್ಯಮಂತ್ರಿಗಳು ವಿತರಿಸಿದರು ಹಾಗೂ ಎಸ್.ಎಸ್.ಎಲ್ ಸಿ. ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಮುಖ್ಯಮಂತ್ರಿಗಳು ಗೌರವಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಎಂ.ಕಾರಜೋಳ, ಡಾ.ಕೆ.ಸಿ.ನಾರಾಯಣಗೌಡ, ಕೆ.ಗೋಪಾಲಯ್ಯ, ಆರ್. ಅಶೋಕ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿಗಳಾದ ಎಸ್. ಅಶ್ವತಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ. ಪಂ ಸಿಇಒ ಶಾಂತ ಎಂ.ಹುಲ್ಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.